ಸಿಹಿ ಮಾತು

ಇದು ಮನಸುಗಳ ಮಾತು

ಎರಡು ಮೊಲಗಳು… (9ನೆಯ ಮುತ್ತು..) ಮಾರ್ಚ್ 14, 2010

Filed under: ಝೆನ್ ಕಥಾ ಕೋಶ... — gkukkemane @ 9:00 ಅಪರಾಹ್ನ
Tags: , , ,

ವಿದ್ಯೆಗೆ ಬೇಕಾಗಿರೋದು ಏಕಾಗ್ರತೆ....

ಹೀಗೊಂದು ಝೆನ್ ಕಥೆ…. ನಿಮಗಾಗಿ ಇಲ್ಲಿ,… ಓದಿ, ಅರ್ಥ ತಿಳಿದ್ರೆ ನಮ್ಗೂ ತಿಳ್ಸಿ,
ಓರ್ವ ಜಟ್ಟಿ ತನ್ನ ಗುರುವನ್ನು ಪ್ರಷ್ನಿಸುತ್ತಾನೆ “ನಾನು ನನ್ನ ವಿದ್ಯೆಯನ್ನು ಇನ್ನೂ ಉತ್ತಮಗೊಳಿಸಲು ಇನ್ನೋರ್ವ ಗುರುಗಳ ಬಳಿ ಶಿಷ್ಯನಾಗಿ ಸೇರಬೇಕೆಂದಿದ್ದೇನೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದನು. ಎರಡು ಮೊಲಗಳ ಹಿಂದೆ ಓಡುವ ಬೇಟೆಗಾರ ಒಂದು ಮೊಲವನ್ನೂ ಹಿಡಿಯಲಾರ ಎಂದು ಗುರುಗಳು ತಿಳಿಸಿದರು.

 

ಮೌನಿ ಗುರು ಮತ್ತು ಮೌನ ಸಾಧನೆ… (8ನೆಯ ಮುತ್ತು) ಮಾರ್ಚ್ 9, 2010

Filed under: ಝೆನ್ ಕಥಾ ಕೋಶ... — Keshava Prasad M @ 10:07 ಅಪರಾಹ್ನ
Tags: , , , , , ,

ಝೆನ್ ಇನ್ನೂ ಇದೆ....

ಶೋಹಿಚಿ ಒಕ್ಕಣ್ಣ ಝೆನ್ ಗುರು. ಅವನಲ್ಲಿ ಜ್ಞಾನದ ಪ್ರಭೆ ಇತ್ತು. ಅವನು ತನ್ನ ಶಿಷ್ಯರಿಗೆ ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ.
ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ.
ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ.
ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅವನು ಅನುಮತಿ ನೀಡುತ್ತಿರಲಿಲ್ಲ.
ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನೂ ಮಾಡಬೇಕಿರಲಿಲ್ಲ.
ಒಂದು ದಿನ ದೇವಾಲಯದ ಸಮೀಪದಲ್ಲಿದ್ದ ಹೆಂಗಸು ಗಂಟೆಗಳ ಸದ್ದು ಕೇಳಿಸಿಕೊಂಡಳು. ಶಿಷ್ಯರು ಗಟ್ಟಿಯಾಗಿ ಸೂತ್ರಗಳನ್ನು ಪಠಿಸುತ್ತಿರುವುದನ್ನು ಕೇಳಿಸಿಕೊಂಡಳು. ಗುರು ತೀರಿ ಹೋದ ಎಂದು ಆಕೆಗೆ ತಿಳಿಯಿತು.

ಗುರು ಇರಲಿ ಇಲ್ಲದೇ ಇರಲಿ…. ಸಾಧನೆ ಮಾಡುವುದಷ್ಟೇ ಶಿಷ್ಯರ ಕೆಲಸ….
ಗುರು ಹೇಳಿದ್ದನ್ನು ನಮ್ಮ ಅನುಕೂಲಕ್ಕೆ, ಅಭ್ಯಾಸಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತ,ದಾರಿ ತಪ್ಪುತ್ತ ಕೊರಗುತ್ತ ಇರುವುದೆ ವಿಧಿಯೆ???

ಇನ್ನೂ ಏನಾದ್ರು ಅರ್ಥ ಆದ್ರೆ ದಯವಿಟ್ಟು ಪ್ರತಿಕ್ರಿಯೆಯಲ್ಲಿ ಬರೀರಿ…

 

ಪ್ರತಿ ಕ್ಷಣ ಝೆನ್..(ಸಾಕ್ಷಾತ್ಕಾರ)… 7ನೆಯ ಮುತ್ತು.. ಫೆಬ್ರವರಿ 21, 2010

Filed under: ಝೆನ್ ಕಥಾ ಕೋಶ... — Keshava Prasad M @ 8:59 AM
Tags: , , ,

ಝೆನ್ ಧ್ಯಾನದ ಮಾದರಿ...

ಝೆನ್ ವಿದ್ಯಾರ್ಥಿಗಳು ಕನಿಷ್ಠಪಕ್ಷ ಹತ್ತು ವರ್ಷ ಶಿಷ್ಯವೃತ್ತಿ ಮಾಡಿದ ಮೇಲಷ್ಟೆ ಇತರರಿಗೆ ಬೋಧಿಸುವ ಗುರುಗಳಾಗುತ್ತಾರೆ. ತೆನೋ ಎಂಬಾತ ತನ್ನ ಶಿಷ್ಯವೃತ್ತಿ ಮುಗಿಸಿ ಗುರುವಾಗಿ ಹಿರಿಯ ನಾನ್ ಇನ್ ಬಳಿಗೆ ಬಂದಿದ್ದ. ಅಂದು ಬಹಳ ಮಳೆ. ತೆನೋ ಹೊರ ಕೋಣೆಯಲ್ಲಿ ತನ್ನ ಮರದ ಚಪ್ಪಲಿಗಳನ್ನೂ ಕೊಡೆಯನ್ನೂ ಇಟ್ಟು ಒಳಬಂದು ನಾನ್ ಇನ್‌ಗೆ ನಮಸ್ಕರಿಸಿದ. “ನಿನ್ನ ಚಪ್ಪಲಿ ಮತ್ತು ಕೊಡೆ ಹೊರಗೆ ಬಿಟ್ಟು ಬಂದಿದ್ದೀಯೆ. ನಿನ್ನ ಕೊಡೆ ಚಪ್ಪಲಿಗಳ ಎಡಗಡೆಗೆ ಇದೆಯೋ, ಬಲಗಡೆಗೋ?” ಎಂದು ನಾನ್ ಇನ್ ಕೇಳಿದ.
ತೆನೋ ಗೊಂದಲಗೊಂಡ. ಪ್ರತಿಕ್ಷಣವೂ ಝೆನ್ ಎಚ್ಚರವನ್ನಿಟ್ಟುಕೊಳ್ಳುವುದು ತನಗೆ ಸಾಧ್ಯವಾಗಿಲ್ಲ ಎಂದು ಅರಿತ. ನಾನ್ ಇನ್ ಬಳಿ ಇನ್ನೂ ಆರು ವರ್ಷವಿದ್ದು ಪ್ರತಿಕ್ಷಣ ಝೆನ್ ಸಾಧಿಸಿದ.
[ಸಾಕ್ಷಾತ್ಕಾರ ಎಂದೋ ಒಮ್ಮೆ ಆಗಿ ಮುಗಿದುಬಿಡುವುದಲ್ಲ, ಪ್ರತಿಕ್ಷಣವೂ ಸಂಭವಿಸುತ್ತಿರಬೇಕು, ಅಲ್ಲವೇ?]

 

ವಾದದಲ್ಲಿ ಗೆದ್ದಿರೋದು ಹೇಗೆ??? 6ನೆಯ ಮುತ್ತು… ಫೆಬ್ರವರಿ 6, 2010

Filed under: ಝೆನ್ ಕಥಾ ಕೋಶ... — Keshava Prasad M @ 10:57 AM
Tags: ,

ಝೆನ್ ಮಾತು...

ಅದೊಂದು ಝೆನ್ ದೇವಾಲಯ. ಅಲ್ಲಿನ ನಿವಾಸಿಗಳನ್ನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಸೋಲಿಸಿದ ಸಂನ್ಯಾಸಿಗೆ ಅಲ್ಲಿರಲು ಅವಕಾಶ ದೊರೆಯುತ್ತಿತ್ತು.
ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗಳಿದ್ದರು. ದೊಡ್ಡವನು ತುಂಬ ಓದಿಕೊಂಡಿದ್ದ, ಚಿಕ್ಕವನು ಮೂರ್ಖ. ಅವನಿಗೆ ಇದ್ದದ್ದು ಒಂದೇ ಕಣ್ಣು.
ಅಲೆಮಾರಿ ಸನ್ಯಾಸಿಯೊಬ್ಬ ಅಲ್ಲಿಗೆ ಬಂದ. ದೇವಾಲಯದಲ್ಲಿ ಉಳಿಯಲು ಅವಕಾಶ ಕೇಳಿದ. ದೊಡ್ಡ ಸನ್ಯಾಸಿ ಅಂದು ದಿನವೆಲ್ಲ ಓದಿ, ಬರೆದು, ವಾದ ಮಾಡಿ ಸುಸ್ತಾಗಿದ್ದ. ಆದ್ದರಿಂದ ಚಿಕ್ಕವನನ್ನು ಕರೆದು ನೀನೇ ವಾದ ಮಾಡು ಎಂದ. ಹುಷಾರು, ಮೌನ ವಾಗ್ವಾದವನ್ನು ಮಾಡುತ್ತೇನೆ ಎಂದು ಮೊದಲೇ ಹೇಳಿಬಿಡು ಎಂದು ಎಚ್ಚರಿಕೆಯನ್ನೂ ನೀಡಿದ.
ಚಿಕ್ಕ ಸನ್ಯಾಸಿ ಮತ್ತು ಅಲೆಮಾರಿ ಸನ್ಯಾಸಿ ಇಬ್ಬರೂ ದೇವಾಲಯದೊಳಗೆ ಹೋಗಿ ಮೌನ ವಾಗ್ವಾದಕ್ಕೆ ಕುಳಿತರು.
ಕೊಂಚ ಹೊತ್ತಿನ ನಂತರ ಅಲೆಮಾರಿ ಸನ್ಯಾಸಿ ವಾಪಸ್ಸು ಬಂದು ಹೇಳಿದ, “ನಿಮ್ಮ ದೇವಾಲಯದ ಚಿಕ್ಕ ಸನ್ಯಾಸಿ ಬಹಳ ಅದ್ಬುತವಾದ ಮನುಷ್ಯ, ನನ್ನನ್ನು ವಾದದಲ್ಲಿ ಸೋಲಿಸಿಬಿಟ್ಟ” ಎಂದು ಹೇಳಿದ.
“ಹೌದೆ? ನಿಮ್ಮ ಮೌನ ವಾಗ್ವಾದದಲ್ಲಿ ಯಾವ ವಿಚಾರವನ್ನು ಚರ್ಚಿಸಿದಿರಿ?” ಎಂದು ಹಿರಿಯ ಸನ್ಯಾಸಿ ಕೇಳಿದ.
ಅಲೆಮಾರಿ ಹೇಳಿದ: “ನಾನು ಮೊದಲು ಒಂದು ಬೆರಳು ತೋರಿಸಿದೆ. ಅದು ಪರಮಜ್ಞಾನವನ್ನು ಪಡೆದ ಬುದ್ಧನ ಅಖಂಡತೆಯ ಸಂಕೇತ. ಅದಕ್ಕೆ ಅವನು ಎರಡು ಬೆರಳು ತೋರಿಸಿದ. ಅದು ಬುದ್ಧ ಮತ್ತು ಅವನ ಬೋಧನೆಗಳನ್ನು ಸೂಚಿಸಿತು. ನಾನು ಮೂರು ಬೆರಳು ತೋರಿಸಿದೆ. ಅಂದರೆ ಬುದ್ಧ, ಅವನ ಚಿಂತನೆಗಳು ಮತ್ತು ಬುದ್ಧನ ಅನುಯಾಯಿಗಳು ಒಟ್ಟು ಮೂರು ಸಂಗತಿಗಳು ಎಂಬುದು ನನ್ನ ಅರ್ಥವಾಗಿತ್ತು. ಅವನು ತನ್ನ ಮುಷ್ಠಿ ಬಿಗಿಹಿಡಿದು ತೋರಿಸಿದ. ಅಂದರೆ ನಾನು ಹೇಳಿದ ಮೂರೂ ಸಂಗತಿಗಳು ಒಂದೇ ಆತ್ಮಜ್ಞಾನದ ಮೂಲದಿಂದ ಬಂದವು ಎಂದು ಸೂಚಿಸಿಬಿಟ್ಟ. ನಾನು ಸೋತೆ. ಇಲ್ಲಿರಲು ನನಗೆ ಹಕ್ಕಿಲ್ಲ. ಹೋಗುತ್ತೇನೆ” ಎಂದು ಹೇಳಿ ಅಲೆಮಾರಿ ಹೊರಟುಹೋದ.
“ಎಲ್ಲಿ ಆ ದುಷ್ಟ” ಎಂದು ಕಿರುಚುತ್ತಾ ಚಿಕ್ಕ ಸನ್ಯಾಸಿ ಬಂದ.
“ಯಾಕೆ, ಏನಾಯಿತು? ನೀನೇ ವಾದದಲ್ಲಿ ಗೆದ್ದೆಯಂತಲ್ಲ” ಎಂದು ಹಿರಿಯ ಸನ್ಯಾಸಿ ಕೇಳಿದ.
“ಗೆದ್ದದ್ದೂ ಇಲ್ಲ, ಎಂಥ ಮಣ್ಣೂ ಇಲ್ಲ. ಎಲ್ಲಿ ಅವನು? ಅವನನ್ನು ಹಿಡಿದು ಬಾರಿಸಬೇಕು” ಎಂದ ಚಿಕ್ಕ ಸನ್ಯಾಸಿ.
“ಮೌನವಾಗ್ವಾದದಲ್ಲಿ ಏನಾಯಿತು ಹೇಳು” ಎಂದ ಹಿರಿಯ ಸನ್ಯಾಸಿ.
ಚಿಕ್ಕ ಸನ್ಯಾಸಿ ಹೇಳಿದ: “ಅವನು ದೇವಾಲಯದಲ್ಲಿ ಕುಳಿತ ಕೂಡಲೆ ಒಂದು ಬೆರಳು ಎತ್ತಿ ತೋರಿಸಿದ. ನನಗೆ ಒಂದೇ ಕಣ್ಣು ಇದೆ ಎಂದು ಅಪಮಾನ ಮಾಡಿದ. ಅವನು ಅಪರಿಚಿತನಾದ್ದರಿಂದ, ಸೌಜನ್ಯ ತೋರಬೇಕೆಂದು ನನ್ನ ಎರಡು ಬೆರಳು ತೋರಿಸಿದೆ. ‘ನಿನಗೆ ಎರಡೂ ಕಣ್ಣು ಇವೆಯಲ್ಲ ಸಂತೋಷ’ ಎಂದು ಅದರ ಅರ್ಥ. ಅದಕ್ಕೆ ಆ ದುಷ್ಟ ಮೂರು ಬೆರಳು ತೋರಿಸಿದ. ‘ನಮ್ಮಿಬ್ಬರಿಗೂ ಸೇರಿ ಒಟ್ಟು ಮೂರೇ ಕಣ್ಣು’ ಎಂದು ಹೇಳಿದಂತೆ ಇತ್ತು. ನನಗೆ ಸಿಟ್ಟು ಬಂದು ಮುಷ್ಠಿ ತೋರಿಸಿದೆ. ಅವನು ಓಡಿ ಹೋದ. ಇಷ್ಟೇ ಆದದ್ದು ಎಂದ.

ಯಾವುದೇ ವಾದ ವಿವಾದ ಇರಲಿ. ಇನ್ನೊಬ್ಬರ ಮಾತನ್ನು ನಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳುತ್ತೇವೆ ಅಲ್ಲವೆ? ನಮ್ಮ ಅರ್ಥಕ್ಕೆ ತಕ್ಕಂತೆ ಸೋಲು, ಗೆಲುವು ಎಂದು ನಿರ್ಧಾರ ಮಾಡಿಕೊಳ್ಳುತ್ತೇವೆ. ವಾದ, ಸೋಲು, ಗೆಲುವು ಎಲ್ಲ ಅರ್ಥಹೀನವೇ!

ಆದರೂ ಕೆಲವೊಮ್ಮೆ…. ಸೋಲಿನಲ್ಲೂ ಹಿತವಿದೆ ಅನ್ಸತ್ತೆ ಅಲ್ವಾ??

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ಕೊನೆಯ ಮೂರು ದಿನ…. (5ನೆಯ ಮುತ್ತು..) ಜನವರಿ 20, 2010

Filed under: ಝೆನ್ ಕಥಾ ಕೋಶ... — Keshava Prasad M @ 4:27 ಅಪರಾಹ್ನ
Tags: , , , ,

ಜ್ಞಾನದ ಬೆಳಕು.... ಬುದ್ಧ..


ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ.
“ಒಂದೇ ಕೈಯಿಂದ ಹುಟ್ಟುವ ಸದ್ದನ್ನು ಕೇಳಿಸಿಕೊ” ಎಂಬ ಮುಂಡಿಗೆಯನ್ನು ಗುರು ಅವನಿಗೆ ನೀಡಿದ. ಧ್ಯಾನದ ಮೂಲಕ ಉತ್ತರವನ್ನು ಕಂಡುಕೋ ಎಂದ.
ಶಿಷ್ಯ ಮೂರು ವರ್ಷಗಳನ್ನು ಗುರುವಿನೊಡನೆ ಕಳೆದ. ಆದರೂ ಅವನಿಗೆ ಉತ್ತರ ದೊರೆಯಲಿಲ್ಲ, ಗುರು ನೀಡಿದ್ದ ಪರೀಕ್ಷೆಯನ್ನು ದಾಟಲಿಲ್ಲ.
ಅವತ್ತು ರಾತ್ರಿ, ಕಣ್ಣಿನ ತುಂಬ ನೀರು ತುಂಬಿಕೊಂಡು, ನಾಚಿಕೆಯಿಂದ ತಲೆ ತಗ್ಗಿಸಿಕೊಂಡು, ಗುರುವಿಗೆ ಹೇಳಿದ-“ಗುರುವೇ, ನೀವು ಇತ್ತ ಸಮಸ್ಯೆಯನ್ನು ಪರಿಹರಿಸಲು ಆಗಲಿಲ್ಲ. ಸೋತು ನಮ್ಮೂರಿಗೆ ಹಿಂದಿರುಗುತ್ತಿದ್ದೇನೆ”.
“ಇನ್ನೊಂದು ವಾರ ಇರು. ಸತತವಾಗಿ ಧ್ಯಾನ ಮಾಡು” ಎಂದ ಸುಯಿಒ.
ಅದೂ ಆಯಿತು. ಆದರೂ ಶಿಷ್ಯನಿಗೆ ಯಾವ ಸಾಕ್ಷಾತ್ಕಾರವೂ ಆಗಲಿಲ್ಲ.
“ಇನ್ನೊಂದು ವಾರ ಇರು” ಎಂದ ಗುರು.
ವಿಧೇಯತೆಯಿಂದ ಇನ್ನೂ ಒಂದು ವಾರ ಕಳೆದ ಶಿಷ್ಯ. ಫಲವೇನೂ ಸಿಗಲಿಲ್ಲ.
“ಇನ್ನೂ ಒಂದು ವಾರ ನೋಡು” ಎಂದ ಗುರು. ಮತ್ತೆ ಅದೇ ವಿಫಲತೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ಕಳಿಸಿಬಿಡಿ ಎಂದು ಶಿಷ್ಯ ಗೋಗರೆದ.
ಇನ್ನೈದು ದಿನ ಧ್ಯಾನಮಾಡಿ ನೋಡು ಎಂದ ಗುರು. ಮತ್ತೆ ಅದೇ ಹಾಡು.
ಗುರು ಹೇಳಿದ. “ಇನ್ನು ಮೂರು ದಿನ ಧ್ಯಾನಮಾಡು. ನಿನಗೆ ಸಾಕ್ಷಾತ್ಕಾರವಾಗದಿದ್ದರೆ ಹೋಗಿ ಪ್ರಾಣಕಳೆದುಕೋ”.
ಎರಡನೆಯ ದಿನ ಶಿಷ್ಯನಿಗೆ ಸಾಕ್ಷಾತ್ಕಾರವಾಗಿತ್ತು.

ನಿಮ್ಗೆ ಇದು ಯಾವ ಥರ ಅರ್ಥ ಆಗಿದೆಯೋ ನನಗೆ ಗೊತ್ತಿಲ್ಲ…. ಆದರೆ ನಿಮಗೆ ನಿಜವಾದ ಅಂತರಾಳ ತಿಳಿಯ ಬೇಕಿದ್ದರೆ ಇನ್ನೊಮ್ಮೆ ಓದಿ…

 

ಆರದಿರಲಿ ದೀಪ…. (4ನೆಯ ಮುತ್ತು) ಜನವರಿ 7, 2010

Filed under: ಝೆನ್ ಕಥಾ ಕೋಶ... — Keshava Prasad M @ 4:28 ಅಪರಾಹ್ನ
Tags: , , ,

ಆರದಿರಲಿ ದೀವಿಗೆ....


ಹಿಂದಿನ ಕಾಲದ ಜಪಾನಿನ ಜನ ರಾತ್ರಿಯ ಹೊತ್ತಿನಲ್ಲಿ ಬಿದಿರಿನ ಬುಟ್ಟಿಗೆ ತೆಳ್ಳನೆಯ ಹಾಳೆಯನ್ನು ಸುತ್ತಿ, ಅದರೊಳಗೆ ಒಂದು ದೀಪವಿಟ್ಟುಕೊಂಡು ಓಡಾಡುತ್ತಿದ್ದರು. ಕುರುಡನೊಬ್ಬ ತನ್ನ ಗೆಳೆಯನನ್ನು ನೋಡಲೆಂದು ಹೋಗಿದ್ದ. ರಾತ್ರಿಯಾಯಿತು. ಗೆಳೆಯ ಅವನ ಕೈಗೆ ಬಿದಿರು ಹಾಳೆಯ ದೀಪವನ್ನು ಕೊಟ್ಟ.
“ದೀಪ ನನಗೇಕೆ? ಹೇಗಿದ್ದರೂ ಕುರುಡ. ಹಗಲು ಇರುಳು ಎರಡೂ ಒಂದೇ ನನಗೆ.”
“ನಿನಗೆ ದೀಪ ಬೇಡವೆಂದು ಗೊತ್ತು. ಆದರೆ ಕತ್ತಲಲ್ಲಿ ಯಾರಾದರೂ ಬಂದು ನಿನಗೆ ಡಿಕ್ಕಿ ಹೊಡೆಯುವುದು ತಪ್ಪುತ್ತದೆ, ಇಟ್ಟುಕೋ” ಎಂದ ಗೆಳೆಯ.
ಕುರುಡ ಒಪ್ಪಿದ. ದೀಪ ಹಿಡಿದು ಹೊರಟ.
ಸ್ವಲ್ಪ ದೂರ ನಡೆಯುವಷ್ಟರಲ್ಲಿ ಯಾರೋ ಅಪರಿಚಿತ ಬಂದು ಡಿಕ್ಕಿ ಹೊಡೆದೇ ಬಿಟ್ಟ.
“ಸರಿಯಾಗಿ ನೋಡಿಕೊಂಡು ನಡೆಯಬಾರದೆ? ಕೈಯಲ್ಲಿರುವ ದೀಪ ಕಾಣಲಿಲ್ಲವೆ” ಎಂದು ಕುರುಡ ರೇಗಿದ.
“ನಿನ್ನ ಕೈಯಲ್ಲಿ ದೀಪವೇನೋ ಇದೆ. ಆದರೆ ಗೆಳೆಯಾ ಅದು ಆರಿಹೋಗಿದೆ” ಎಂದ ಅಪರಿಚಿತ.

ನಾವು ತಿಳಿವಳಿಕೆ ಎಂದು ತಿಳಿದಿರುವುದೆಲ್ಲ ಕುರುಡನ ಕೈಯಲ್ಲಿರುವ ಆರಿಹೋದ ದೀಪದಂಥದೇ?
ಜೀವನ ನಾವು ತಿಳಿದಷ್ಟು ಸರಳವಾಗಿಲ್ಲ… ಇನ್ನೊಬ್ಬರತ್ತ ಬೊಟ್ಟು ಮಾಡುವ ಮೊದಲು ನಿಮ್ಮನ್ನ ನೀವು ತಿಳಿದುಕೊಳ್ಲೀ…

 

ನಗುವ ಬುದ್ಧ… (3ನೆಯ ಮುತ್ತು) ಜನವರಿ 2, 2010

Filed under: ಝೆನ್ ಕಥಾ ಕೋಶ... — Keshava Prasad M @ 4:42 ಅಪರಾಹ್ನ
Tags: , , , ,

ನಗುವ ಬುದ್ಧ...


ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.
ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.
ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.
ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.
ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ ಉತ್ತರ.
“ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?” ಎಂದು ಆ ಗುರು ಮತ್ತೆ ಕೇಳಿದ.
ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.

 

ಒಮ್ಮೊಮ್ಮೆ ಹಾಗಾಗುತ್ತೆ…. (2ನೇ ಮುತ್ತು) ಡಿಸೆಂಬರ್ 25, 2009

Filed under: ಝೆನ್ ಕಥಾ ಕೋಶ... — Keshava Prasad M @ 4:46 ಅಪರಾಹ್ನ
Tags: , , ,


ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
“ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ” ಎಂದು ಹೇಳುತ್ತಾನೆ.
ಆಗ ಗುರು” ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ” ಎನ್ನುತ್ತಾನೆ

ಸ್ವಲ್ಪ ದಿನಗಳ ನಂತರ ಶಿಷ್ಯನು ಮತ್ತೆ ಗುರುವಿನ ಬಳಿ ಹೋಗಿ
“ಗುರುಗಳೆ , ನನ್ನ ಧ್ಯಾನ ಯಶಸ್ವಿಯಾಗಿದೆ, ಸಾಧನೆ ಅದ್ಭುತವಾಗಿದೆ, ಜ್ಞಾನ ನನಗೆ ಲಭಿಸಿದೆ ಅನ್ನಿಸುತ್ತಿದೆ” ಎಂದು ಹೇಳುತ್ತಾನೆ .
ಆಗ ಗುರುವು” ಚಿಂತಿಸಬೇಡ , ಒಮ್ಮೊಮ್ಮೆ ಹಾಗನಿಸುವದುಂಟು , ಅದಕ್ಕೆಲ್ಲ ಗಮನ ಕೊಡಬೇಡ” ಎನ್ನುತ್ತಾನೆ!!!!

(ಯಾವತ್ತೂ ಹಾಗೆ… ಸಾಧಕನಿಗೆ ಯಾವೂದೂ ಅತೀ ಅಂತನಿಸಬಾರದು…. ಯಾವತ್ತು ನೀವು ನಿಮ್ಮ ಗುರಿ ಮುಟ್ಟಿದ್ದೀರಿ ಅಂತ ಅಂದು ಕೊಳ್ಳುತ್ತೀರೋ ಅವತ್ತಿಗೆ ನಿಮ್ಮ ಬೆಳವಣಿಗೆಯ ಅವನತಿ ಆರಂಭವಾಗುತ್ತದೆ)

 

ಝೆನ್ ಅಂದ್ರೆ….. (ಒಂದನೇ ಮುತ್ತು) ಡಿಸೆಂಬರ್ 22, 2009

Filed under: ಝೆನ್ ಕಥಾ ಕೋಶ... — Keshava Prasad M @ 4:44 ಅಪರಾಹ್ನ
Tags: , , ,

ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿನ ಸಮಯ. ಗುರುವಿಗೆ ಏನಾದರೂ ಹಣ್ಣನ್ನು ತಿನ್ನಬೇಕೆಂದು ಅನ್ನಿಸಿ ತನ್ನ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲವೆನಿಸಿ, ಪಕ್ಕದಲ್ಲಿಯೇ ಇದ್ದ ಶಿಷ್ಯನಿಗೂ ಕೊಡುವುದಕ್ಕೆಂದು ಹಣ್ಣನ್ನು ಎರಡು ಭಾಗ ಮಾಡಿ, ಶಿಷ್ಯನಿಗೆ ಒಂದನ್ನು ಕೊಟ್ಟು ತನ್ನ ಭಾಗದ ಮೂಸಂಬಿಯನ್ನು ತಿನ್ನಲು ಪ್ರಾರಂಭಿಸಿದ.
“ಗುರುಗಳೇ, ನೀವು ಮಾಡುವ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ಹಾಗಿದ್ದ ಮೇಲೆ, ಈ ಮೂಸಂಬಿಯನ್ನು ಇಬ್ಭಾಗ ಮಾಡಿ ಹಂಚಿಕೊಳ್ಳುವುದರ ಮೂಲಕ ನನಗೇನಾದರೂ ಹೊಸ ಸಂದೇಶ ಕೊಡುತ್ತಿದ್ದೀರಾ?” ಕೇಳಿದ ಶಿಷ್ಯ. ಗುರು ಏನೂ ಉತ್ತರ ಹೇಳದೆ ಸುಮ್ಮನೆ ತನ್ನ ಪಾಡಿಗೆ ತಾನು ಮೂಸಂಬಿ ತಿನ್ನುವುದರಲ್ಲಿ ತಲ್ಲೀನನಾಗಿದ್ದ.
“ನೀವು ಮೌನವಾಗಿದ್ದೀರಿ ಅಂದರೆ ಏನನ್ನೋ ಆಳವಾಗಿ ಚಿಂತಿಸುತ್ತಿದ್ದೀರಿ ಅಂತನ್ನಿಸುತ್ತೆ” ಮುಂದುವರೆದ ಶಿಷ್ಯ ಹೇಳಿದ “ಓಹೋ, ಹೀಗಿರಬೇಕು: ಮೂಸಂಬಿ ತಿಂದಾಗ ಸಿಗುವ ಆನಂದ ಹಣ್ಣಿನಲ್ಲಿದೆಯೋ ಅಥವಾ ಅದನ್ನು ಅನುಭವಿಸುವ ನಾಲಗೆಯಲ್ಲಿದೆಯೋ ಎಂಬ ವಿಷಯದ ಬಗ್ಗೆ ನೀವು ಗಾಢವಾಗಿ ಆಲೋಚಿಸುತ್ತಿರಬೇಕು, ಅಲ್ಲವ್?”. ಗುರು ಈಗಲೂ ಏನೂ ಮಾತಾಡಲಿಲ್ಲ.
ಇದರಿಂದ ಉತ್ತೇಜಿತನಾದ ಶಿಷ್ಯ ಮುಂದುವರೆದ; “ನಿಜ ಗುರುಗಳೆ, ಜೀವನದಲ್ಲಿ ಪ್ರತಿ ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ನನಗೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ! ತಪ್ಪಿದ್ದಲ್ಲಿ ತಿದ್ದಿ. ಹಣ್ಣನ್ನು ತಿಂದಾಗ ಸಿಗುವ ಆನಂದ ಬರಿಯ ಹಣ್ಣಿನಲ್ಲೂ ಇಲ್ಲ ಅಥವ ಬರಿಯ ನಾಲಗೆಯಲ್ಲೂ ಇಲ್ಲ. ಅದು ತಿನ್ನಲ್ಪಡುವ ವಸ್ತು ಮತ್ತು ಅದನ್ನು ಅನುಭ….”. ಶಿಷ್ಯನ ಮಾತನ್ನು ಅರ್ಧಕ್ಕೇ ತಡೆದ ಗುರು ಹೇಳಿದ “ಸಾಕು ಮಾಡು ನಿನ್ನ ಹುಚ್ಚು ವಿಚಾರಗಳನ್ನು! ನಾನು ಬಿಸಿಲಿನಲ್ಲಿ ತಂಪಾಗಿರುತ್ತೆ ಅಂತ ಮೂಸಂಬಿಯೊಂದನ್ನು ತಿನ್ನಲು ಹೊರಟೆ. ಪಕ್ಕದಲ್ಲೇ ಇದ್ದೆಯಲ್ಲ ಅಂತ ನಿನಗೂ ಅರ್ಧ ಕೊಟ್ಟೆ, ಅಷ್ಟೆ. ನಿನಗೆ ಬೇಕಿದ್ದಲ್ಲಿ ಮೂಸಂಬಿಯನ್ನು ತಿಂದು ಆನಂದ ಅನುಭವಿಸು. ಮೂಸಂಬಿ ತಿನ್ನುವಾಗ ಸಿಗುವ ಆನಂದದ ಬಗ್ಗೆ ಕೂಡ ಯೋಚಿಸುತ್ತ ಆ ಆನಂದವನ್ನು ಕಳೆದುಕೊಳ್ಳಬೇಡ. ಝೆನ್ ಎಂದರೆ ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು”

 

ಝೆನ್ ಕಥಾಕೋಶ ಆರಂಭಿಸುವ ಮುನ್ನ ಝೆನ್ ಬಗ್ಗೆ ಒಂದಿಷ್ಟು…..

Filed under: ಝೆನ್ ಕಥಾ ಕೋಶ... — Keshava Prasad M @ 3:28 ಅಪರಾಹ್ನ
Tags: , , , , , , ,

ನಂಗೆ ನಿಜವಾಗ್ಲೂ ಈ ಝೆನ್ ಕಥೆಗಳ ಬಗ್ಗೆ ಮೊದ್ಲು ಅಷ್ಟೇನು ಗೊತ್ತಿರ್ಲಿಲ್ಲ…. but… ಎಲ್ಲೋ ಒಂದು ಕಡೆ ಅದರ ಹುಚ್ಚು ಹಿಡಿಸ್ಕೊಂಡೆ ನೋಡಿ,… ಅಲ್ಲಿಂದ ಇಲ್ಲಿ ತನ್ಕಾನು ನಾನು ಒಮ್ಮೊಮ್ಮೆ ಅದನ್ನ ಓದಿದಾಗ್ಲೂ ಒಂದೊಂದ್ ಥರಾ ಅರ್ಥ ಕೊಡುತ್ತಾ ಇರತ್ತೆ… Really Awesome ಕಣ್ರೀ…. ಅದಕ್ಕಾಗೆ ಇಂಥ ಒಂದು ಒಳ್ಲೆ ಜ್ಞಾನಾನ ನಿಮ್ ಜೊತೆ ಹಂಚಿಕೊಳ್ಳೋಣ ಅನ್ನಿಸ್ತು… ಅದರಿಂದಾಗೇ ಈ ಹೊಸ Category…. ಕಥೆಗಳ ಗುಚ್ಛಾನಾ ಆರಂಭಿಸೋದಕ್ಕೂ ಮೊದ್ಲು ನಾನು ಓದಿ, ಕೇಳಿ ತಿಳ್ಕೊಂಡ ಕೆಲ ವಿಶ್ಯಗಳನ್ನ (ಝೆನ್ ಬಗ್ಗೆ) ಇಲ್ಲಿ ಹೇಳ್ತಾ ಇದ್ದೀನಿ…

ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು…ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆಯಂತೆ.ಈ ಝೆನ್ ಕಥೆಗಳು ಹೆಚ್ಚಾಗಿ ಒಬ್ಬೊಬ್ಬ ಗುರುಗಳ ಮೂಲಕ ಬೆಳೆಯಿತು ಅಂತಾರೆ… ಇಲ್ಲಿ ದಿನ-ದಿನ ನಡೆಯೋ ವಿಚಾರಗಳಲ್ಲೇ ಭಗವಂತನ ಸಾಕ್ಷಾತ್ಕಾರ ಮತ್ತು ಜ್ಞಾನೋದಯ ಆಗುವಂತೆ ಕಥೆಗಳನ್ನ ಹೆಣೆದಿದ್ದಾರೆ…
ಒಂದೇ ಓದಿಗೆ ಈ ಕಥೆಗಳು ಅರ್ಥ ಆಗೋದು ಬಹಳ ಕಷ್ಟ.. ಒಂದು ವೇಳೆ ನಿಮ್ಗೆ ಅರ್ಥ ಆಗಿದೆ ಅಂತ ನೀವು ಅನ್ಕೊಂದ್ರೂ ನಿಜವಾದ ಅರ್ಥ ಬೇರೇನೇ ಆಗಿರತ್ತೆ.. ಇದೇ ಝೆನ್ ಕಥೆಗಳ್ಳಲ್ಲಿರೋ ಮಜಾ…
ಸಾಕ್ಷಾತ್ಕಾರಕ್ಕೆ, ಸಾಕ್ಷಾತ್ಕಾರ ಕ್ಷಣದ ಸತೋರಿಯನ್ನು ಅನುಭವಕ್ಕೆ ತಂದುಕೊಳ್ಳುವುದಕ್ಕೆ ದಾರಿಗಳು ಇವೆಯೆ? ಇವೆ ಎಂದು ಝೆನ್ ನಂಬುತ್ತದೆ. ಇಂಥದೇ ದಾರಿ ಸರಿಯಾದ ದಾರಿ ಎಂಬ ಹಟದಲ್ಲಿ ಝೆನ್ ನಲ್ಲಿ ಕೂಡ ಅನೇಕ ಪಂಥಗಳು ಹುಟ್ಟಿಕೊಂಡವು.ಇವುಗಳಲ್ಲಿ ರಿನ್‌ಝಾಯ್ (ಚೀನೀ ಭಾಷೆಯಲ್ಲಿ ಲಿನ್-ಚೀ), ಸೊಟೋ (ಚೀನೀ ಭಾಷೆಯಲ್ಲಿ ತ್ಸ ಒ-ತುಂಗ್) ಒಬಕು (ಚೀನೀ ಭಾಷೆಯಲ್ಲಿ ಹುವಾಂಗ್-ಪೊ) ಎಂದು ಕರೆಯಲಾಗುವ ಪಂಥಗಳು ಮುಖ್ಯವಾದ ಪಂಥಗಳು ಎಂದು ಕೂಡಾ ಹೇಳುತ್ತಾರೆ…. (Wikipedia ಮಾಹಿತಿ).
ಇಪ್ಪತ್ತನೆಯ ಶತಮಾನದಲ್ಲಿ ಝೆನ್‌ನ ವಿವಿಧ ಅಂಶಗಳ ಬಗ್ಗೆ ಪಾಶ್ಚಾತ್ಯ ಜಗತ್ತಿನಲ್ಲೂ ಆಸಕ್ತಿ ಹೆಚ್ಚಿತು . ಉತ್ತರ ಅಮೆರಿಕ ಮತ್ತು ಯೂರೋಪುಗಳಲ್ಲಿ ಝೆನ್ ಅಭ್ಯಾಸದಲ್ಲಿ ತೊಡಗಿರುವ ಅನೇಕ ಸಣ್ಣ ದೊಡ್ಡ ಗುಂಪುಗಳು ಇವೆಯಂತೆ.ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಶ್ರೀ ಕೆ.ವಿ. ಸುಬ್ಬಣ್ಣ ಅವರ ಝೆನ್ ಕಥೆಗಳು ಒಳಗೊಂಡಂತೆ ಅನೇಕರ ಮುಖಾಂತರ ಝೆನ್ ಕತೆಗಳು ಕನ್ನಡಕ್ಕೆ ಬಂದಿವೆ. ಶ್ರೀ ಯು. ಆರ್. ಅನಂತಮೂರ್ತಿಯವರು ದಾವ್ ದ ಜಿಂಗ್ ಎಂಬ ಹೆಸರಿನಲ್ಲಿ ತಾವೊ ತತ್ವಗಳನ್ನು ಪರಿಚಯಿಸಿದ್ದಾರೆ. ತಬ್ಬಿಬ್ಬುಮಾಡುವ, ಕೆಣಕುವ, ಕಚಗುಳಿ ಇಡುವ ಈ ಕತೆಗಳನ್ನು ಮೆಲುಕು ಹಾಕಿದರೆ ಹೊಸ ಬೆಳಕು ಹೊಳೆದಂತೆ ಆಗುತ್ತದೆ, ಅಂತ ಕಥೆಗಳನ್ನ ಹುಡುಕಿ,ಅಗತ್ಯವಿದ್ದಲ್ಲಿ ತರ್ಜುಮೆ ಮಾಡಿ ನಿಮ್ಗೆ ನೀಡೋ ಕೆಲ್ಸ ನನ್ನದು…. ಅದನ್ನ ಓದಿ, ಅರಗಿಸಿ, ಅಭಿಪ್ರಾಯ ಬರೆಯೋ ಕೆಲ್ಸ ನಿಮ್ದು….

ನಿಮ್ಮವ,
ಕೇಶವ ಪ್ರಸಾದ ಮಾರ್ಗ