ಸಿಹಿ ಮಾತು

ಇದು ಮನಸುಗಳ ಮಾತು

ಬುದ್ಧಿವಂತರ ನಾಡಲ್ಲಿ ರೋಡೇ ಇಲ್ಲ.. ಆದರೂ ಒಬ್ಬರದೂ ಸೊಲ್ಲಿಲ್ಲ!!! ಜನವರಿ 21, 2010

Filed under: ನನ್ನ ಹರಟೆಗಳು — Keshava Prasad M @ 5:20 ಅಪರಾಹ್ನ
Tags: , , , , , , ,

ಹೌದು, ಇಲ್ಲಿಯವರು ಎಲ್ಲರಿಂದಲೂ ಬುದ್ಧಿವಂತರೆಂದೇ ಕರೆಸಿಕೊಳ್ಳೋದು… ಹೆಚ್ಛೇಕೆ ಈ ಎರಡು ಜಿಲ್ಲೆಗಳನ್ನ ಕರೆಯೋದೇ ಬುದ್ಧಿವಂತರ ಜಿಲ್ಲೆ ಎಂದು… ಇನ್ನು ಇದು ಇರೋದೋ… ದೇವರ ಸ್ವಂತ ನಾಡಿಗೆ ಹೊಂದಿಕೊಂಡು… ಈಗ ನಿಮಗೆ ಖಂಡಿತಾ ಗೊತ್ತಾಗಿರತ್ತೆ ನಾನು ಹೇಳ್ತಾ ಇರೋದು ಯಾವ ನಾಡಿನ ಬಗ್ಗೆ ಅಂತ…. ಹೌದು ಸ್ವಾಮಿ.. ಇದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು… ಪಕ್ಕದ ರಾಜ್ಯ ಕೇರಳ… ಇನ್ನೂ ಹೇಳ್ಬೇಕಂದ್ರೆ ನನ್ನ ಸ್ವಂತ ಊರು.. (ಅದಕ್ಕೇ ಸ್ವಾಮಿ ನಂಗೆ ಇಷ್ಟು ಬುದ್ಧಿ ಇರೋದು!!!).

NH - 17 ನ ಒಂದು ನೋಟ


ಈಗ ವಿಷಯಕ್ಕೆ ಬರೋಣ… ಮೊದ್ಲೆಲ್ಲಾ ಈ ಜಿಲ್ಲೆಯ ರಸ್ತೆಗಳಲ್ಲಿ ಪ್ರಯಾಣ ಅಂದ್ರೆ ಎಲ್ಲಾರು ತುಂಬಾ ಖುಷಿಯಾಗೋರು… ಯಾಕಂದ್ರೆ NH 17 ಏನಿದ್ಯಲ್ಲ.. ಅದು ಹಾದು ಹೋಗೋ ಜಾಗಗಳೆಲ್ಲಾ ಸಿಕ್ಕಾಪಟ್ಟೆ ಪ್ರಸಿದ್ಧ.. ಸಮುದ್ರ ತೀರದಲ್ಲೇ ಪ್ರಯಾಣ, ಜತೆಗೆ ಇತಿಹಾಸ ಪ್ರಸಿದ್ಧ ದೇವಸ್ಥಾನಗಳೂ,ಕೋಟೆ ಕೊತ್ತಲಗಳು… ಹೊಟ್ಟೆ ಹಸಿದರೆ ಸಾಕಷ್ಟು ಒಳ್ಳೆಯ ಹೋಟೆಲ್ ಗಳು…ಇನ್ನೇನು ಬೇಕು??? ಸ್ವರ್ಗಕ್ಕೆ ಮೂರೇ ಗೇಣು!!!!.

ರಸ್ತೆಯನ್ನ ಹುಡುಕಿದವರಿಗೆ ಹೆದ್ದಾರಿ ಇಲಾಖೆ ಬಹುಮಾನ ಘೋಷಿಸಿದೆ... try ಮಾಡಿ!!!


ಅದೇ ದಾರಿ, ಅದೇ ಊರುಗಳು,ಅದೇ ಹೋಟೆಲ್ ಗಳು…. ಆದ್ರೆ ಈಗ ನೀವಲ್ಲಿ ಹೋದ್ರೆ ನರಕಕ್ಕೆ ಮೂರು ಗೇಣು ಕೂಡಾ ಇಲ್ಲ!!! ಅದ್ಕಿಂತ ಮೊದ್ಲು ಅಲ್ಲಿ ಹೋಗೋಕೇ ರೋಡೇ ಇಲ್ಲ!!!! ಅಂದ್ರೆ NH 17 ಇಲ್ಲ ಅಂತಲ್ಲ… ಇದೆ, ಆದ್ರೆ ನೀವು ಅದರಲ್ಲಿರೋ ಹೊಂಡ ಗುಂಡಿಗಳಲ್ಲಿ ರಸ್ತೇನಾ ಹುಡುಕಿಕೊಂಡು ಹೋಗ್ಬೇಕು ಅಷ್ಟೆ. ಇದು ಕೇವಲ NH 17 ಒಂದರ ಕಥೆ ಮಾತ್ರ ಅಲ್ಲ… ಈ ಜಿಲ್ಲೆಗಳ ಸಣ್ಣ-ದೊಡ್ಡ ಎಲ್ಲಾ ರಸ್ತೆಗಳ ಕಥೆಗಳೂ ಒಂದೇ… ಆದ್ರೆ ಇದನ್ನ ಸರಿಪಡಿಸೋ ಬಗ್ಗೆ ಬರೀ ಮಾತುಕಥೆಗಳು ಕೇಳುತ್ತಾ ಇವೆಯಷ್ಟೆ ಹೊರತು ಕಾರ್ಯ ಮಾತ್ರ ನಡೀತಾನೇ ಇಲ್ಲ!!!! ಅದಕ್ಕೇ ನಾನು ಹೇಳಿರೋದು… ಒಬ್ಬರದೂ ಸೊಲ್ಲಿಲ್ಲ ಅಂತ!!!
ನೀವು ಬೆಂಗಳೂರು ಅಥವಾ ಹುಬ್ಳಿಯಿಂದ ವಾಹನಗಳಲ್ಲಿ ಈ ನಾಡಿಗೆ ಬರೋರು ಅಂತಾದ್ರೆ ಒಂದು ದಿನ ಮೊದ್ಲೇ ಹೊರಡೋದೇ ವಾಸಿ!!! ಎಷ್ಟೇ ಹೊಸ ವಾಹನ ನಿಮ್ಮದಾಗಿದ್ರೂ ಅದು ಅದೇ ಸ್ಥಿತಿಯಲ್ಲಿ ಈ ನಾಡಿಗೆ ತಲುಪತ್ತೆ ಅನ್ನೋ ನಂಬಿಕೆ ಸಾಕ್ಷಾತ್ ಆ ವಾಹನ ತಯಾರಿಕಾ ಕಂಪನಿಗೆ ಕೂಡಾ ಇರೋದು ಡೌಟೇ!!!
ಹಾಗಂತ ಹೇಳಿ ಇಲ್ಲಿಯ ಬುದ್ಧಿವಂತರು ಸುಮ್ಮನೆ ಕೂತಿಲ್ಲ… ಎಲ್ಲಾ ಚುನಾವಣೆಗಳಲ್ಲೂ ರಸ್ತೆ ಸರಿಪಡಿಸುತ್ತೇವೆ ಅಂತಂದೋರನ್ನೇ ಆರಿಸಿ ಕಳ್ಸಿದ್ದಾರೆ ಪಾಪ. ಎಲ್ಲೋ ಮೂರೋ ನಾಲ್ಕು ಮಂದಿ ಸೇರ್ಕೊಂಡು “ಹೋರಾಟ ಸಮಿತಿ” ರಚಿಸಿಕೊಂಡು ಸ್ವಲ್ಪ ಹೋರಾಟ/ಹಾರಾಟ ಎಲ್ಲಾನೂ ಮಾಡಿದ್ದಾರೆ. ಆದ್ರೆ ಆಗಿರೋ ಉಪಯೋಗ ಏನು ಅಂತ ಮಾತ್ರ ಕೇಳ್ಬೇಡಿ!!!

ನೋಡಿ ಅವಸ್ಥೆ.... ರಸ್ತೆ ಅಂದ್ರೆ ದೇವರಿಗೇ ಪ್ರೀತಿ!!!!!


ಇಲ್ಲಿನ ಜನರೇ ಆ ಥರಾ… ಎಲ್ಲಾರೂ Self Centered.. ಅಂತಾರಲ್ಲ ಆ ಥರಾ… ಏನು ಕೆಲ್ಸ ಮಾಡಿದ್ರು ತಮ್ಗೇನು ಲಾಭ ಅಂತ 1st ಯೋಚನೆ ಮಾಡ್ತಾರೆ… ಇನ್ನು ತನಗೆ ಉಪಯೋಗ ಆಗಲ್ಲ ಅಂತ ಗೊತ್ತಾದ್ರೆ ಅದನ್ನ ಯಾರು ಮಾಡ್ತಾರಲ್ಲ…. ಅವ್ರನ್ನ ಎಷ್ಟು ಸಾಧ್ಯಾನೋ ಅಷ್ಟು ಟೀಕಿಸ್ತಾರೆ… ಅಲ್ಲಿಗೆ ಒಂದು ಒಳ್ಳೇ ಕೆಲ್ಸ ಮಾಡೋಣ ಅಂತ ಹೊರ್ಟೋರಿಗೆ ಅರ್ಧ ಹಿನ್ನಡೆ ಉಂಟಾಗಿರತ್ತೆ,,… ಉಳ್ದಿದ್ದನ್ನ ಇಲ್ಲಿಯ ರಾಜಕೀಯ ಪಕ್ಷಗಳು ಉಪಯೋಗಿಸಿಕೊಳ್ಳುತ್ತಾರೆ… ಅದಕ್ಕೇ ಇಲ್ಲಿ ಆರಂಭವಾಗಿರೋ ಹಲವಾರು ಚಳುವಳಿಗಳು ಅಲ್ಲಿಗೇ ಮುಳುಗಿ ಹೋಗಿವೆ…
ಅಲ್ಲ.. ಮಂಗಳೂರು ಅಂದ್ರೆ ಕರ್ನಾಟಕದ 2ನೇ ರಾಜಧಾನಿ ಇದ್ದ ಹಾಗೆ.. ಎಲ್ಲಾ ಸಾಗರ ವಾಣಿಜ್ಯ ವಹಿವಾಟಿನ ಹೆಬ್ಬಾಗಿಲು… ಆದ್ರೆ ಇಲ್ಲಿಗೆ ಬರೋಕೆ ಸಾಗರ ಮತ್ತು ಆಗಸದಲ್ಲಿ ಮಾತ್ರ ಸಾಧ್ಯ ಆಗೋ ಥರ ಇದೆ ಅಂದ್ರೆ ಇದಕ್ಕೆ ಏನನ್ಬೇಕು???… ಮಂಗಳೂರು ಬೆಂಗಳೂರು ನಡುವಿನ ಪ್ರಯಾಣದ ಅವಧಿ ಅನಿರ್ದಿಷ್ಟ ಅವಧಿಗೆ ಹೆಚ್ಚಾಗಿದೆ ಅಂದರೆ ಯೋಚನೆ ಮಾಡಿ…(ಅಂದ್ರೆ ಮೊದ್ಲು 8 ಗಂಟೆ ಇದ್ದ ಪ್ರಯಾಣದ ಅವಧಿ ಈಗ 14 ಗಂಟೆಗಿಂತನೂ ಜಾಸ್ತಿ ಆಗ್ಬಿಟ್ಟಿದೇರಿ).. ಇಷ್ಟೆಲ್ಲಾ ಆಗಿದ್ದು ಇತ್ತೀಚಿಗೆ ಅಂತ ತಿಳ್ಕೋಬೇಡಿ… ಸುಮಾರು 3-4 ವರ್ಷಗಳಿಂದ ಇಲ್ಲಿಯದ್ದು ಇದೇ ಗೋಳು… ಆದ್ರೆ ಕೇಳೋರು ಮಾತ್ರ ಯಾರೂ ಇಲ್ಲ!!!
ಇದರಿಂದಾಗಿ ನಿಜವಾದ ತೊಂದ್ರೆ ಅನುಭವಿಸೋರು ಅಂದ್ರೆ ಇಲ್ಲಿ ದಿನಾ ಪ್ರಯಾಣ ಮಾಡ್ಬೇಕಾಗಿರೋ ಪಾಪದ ಪ್ರಯಾಣಿಕರು,ವಾಹನ ಚಾಲಕರು ಮತ್ತು ಪಾದಾಚಾರಿಗಳು… ಒಂದೆಡೆ ಈ ಥರಾ ಖರಾಬಾಗಿರೋ ರಸ್ತೆ, ಇನ್ನೊಂದೆಡೆ ಸಿಕ್ಕಾಪಟ್ಟೆ ಧೂಳು… ಜತೆಗೆ ಹೊಂಡ-ಗುಂಡಿ ತಪ್ಪಿಸಿಕೊಳ್ಳೋ ತರಾತುರಿಯಲ್ಲಿ ಎಲೆಲ್ಲೋ ನುಗ್ಗುವ ವಾಹನಗಳು… ಒಂದಾ ಎರಡಾ???? ದಿನಕ್ಕೆ ಕನಿಷ್ಟ ಒಂದೆರಡಾದ್ರೂ ಅಪಘಾತ ಆಗಿಲ್ಲ ಅಂದ್ರೆ ಕೇಳಿ!!!! ಈ ನಾಡಿನ ಜನಸಾಮಾನ್ಯ ಮನೆ ಬಿಟ್ಟು ಹೊರಗಡೆ ಹೊರಟ್ರೆ ವಾಪಸ್ ಬಂದ ಮೇಲೇನೆ ಅವ್ನು ಸೇಫಾಗಿ ಬಂದಿದ್ದಾನೆ ಅನ್ಕೋ ಬಹುದಾದಂಥಾ ಪರಿಸ್ಥಿತಿ….
ಹೇಳೋಕೆ ಹೊರಟ್ರೆ ಒಂದು Phd ನೇ ಮಾಡಿ ಬಿಡ್ಬಹುದು ಇಲ್ಲಿನ ರಸ್ತೆಗಳ ಕರ್ಮಕಾಂಡಗಳ ಬಗ್ಗೆ…
ನಾಡಿದ್ದು 26 ರಂದು ಈ ನಾಡಿನ ಜನರೆಲ್ಲಾ ಒಟ್ಟಾಗಿ ರಸ್ತೆ ತಡೆ ಮಾಡೋದಿಕ್ಕೆ ರೆಡಿಯಾಗಿದ್ದಾರೆ… ಅವ್ರಿಗೆ ಶುಭವಾಗಲಿ, ಬುದ್ಧಿವಂತರ ಜಿಲ್ಲೆಗೆ ಅನ್ಯಾಯ ಆಗದೇ ಇರಲಿ ಅನ್ನೋದೇ ನನ್ನ ಕಳಕಳಿ..

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ