ಸಿಹಿ ಮಾತು

ಇದು ಮನಸುಗಳ ಮಾತು

ಸ್ನೇಹಿತರ ದಿನಾಚರಣೆ …. ಒಂದೆರಡು ಥಾಟ್ಸ್… !!! August 7, 2011

ಸ್ನೇಹದ ಕಡಲಲ್ಲಿ...

ಹೌದು,…. ಎಲ್ಲಾರು ಸ್ನೇಹಿತರ ದಿನಾಚರಣೆ, ಸ್ನೇಹಿತರ ವೀಕ್ ಅಂತ ಸಾಯ್ತಾ ಇರ್ತಾರೆ… ಆ ಟೈಮ್ ನಲ್ಲಿ ಅವ್ರು ಕಳ್ಸೋ ಮೆಸ್ಸೇಜ್ ಗಳೇನು.. ಮೇಲ್ ಗಳೇನು.. ಅಬ್ಬಬ್ಬಾ… ಆದ್ರೆ ಆ ವೀಕ್ ಮುಗೀತು ಅಂದ್ರೆ ಅವ್ರಿಗೆ ಆ ಫ್ರೆಂಡ್ ನೆನ್ಪಿರ್ತನೋ ಇಲ್ವೋ.. !!!!
ನಮ್ಮಲ್ಲಿ ಎಲ್ಲಾನು ಅಸ್ಟೇ… ಸ್ವಲ್ಪ ಅತಿಯಾಗೆ ಮಾಡ್ತೀವಿ… ಅದು ಸ್ನೇಹಿತರ ದಿನಾಚರಣೆ ಇರ್ಬೋದು ಅಥವ ಪ್ರೇಮಿಗಳ ದಿನಾಚರಣೆ ಇರ್ಬೋದು… ನಮಗೆ ಏನೂ difference ಅನ್ಸಲ್ಲ… ಏನೋ ಎಲ್ಲರೂ ಮೆಸ್ಸೇಜ್ ಕಳಿಸ್ತಿದ್ದಾರೆ ನಾನು ಫಾರ್ವರ್ಡ್ ಮಾಡ್ತೀನಿ ಅಸ್ಟೇ…!!! ಹೋಗ್ಲಿ ಬಿಡಿ.. ನಾನು ನೀವು ಸೇರ್ಕಂಡು ಎಲ್ಲಾನೂ ಚೇಂಜ್ ಮಾಡಕ್ಕೆ ಆಗಲ್ಲ ಆಲ್ವಾ???
ಆದ್ರೆ ನಾನಿಲ್ಲಿ ಒಂದು ವಿಷ್ಯ ಮಾತ್ರ ಹೇಳಲೇ ಬೇಕು.. ಅದ್ಕೆ ಸುಮಾರು ದಿನದ ನಂತರ ಸಿಹಿಮಾತು ಓಪನ್ ಮಾಡಿದ್ದೀನಿ..😉
ಹೌದು ನಮಗೆ ಬಹಳಷ್ಟು ಜನ ಫ್ರೆಂಡ್ಸ್ ಇರ್ತಾರೆ.. ಕೆಲವರು ಬಾಲ್ಯ ಸ್ನೇಹಿತರು.. ಇನ್ನು ಕೆಲವರು ಸ್ಕೂಲ್ ಮೇಟ್ಸ್, ಕಾಲೇಜ್ ಮೇಟ್ಸ್, ಅಥವ ಆಫೀಸ್ ಫ್ರೆಂಡ್ಸ್… ಆದ್ರೆ ಎಲ್ಲರು ಎಲ್ಲಾ ಕಾಲದಲ್ಲೂ ನಿಮಗೆ ಫ್ರೆಂಡ್ಸ್ ಆಗಿರ್ತಾರ??? ಹೋಗ್ಲಿ ನೀವಿದನ್ನ ಯೋಚನೆ ಮಾಡಿದ್ದೀರಾ?? ಅವ್ರು ಎಲ್ಲ ಕಾಲದಲ್ಲೂ ನಿಮ್ ಫ್ರೆಂಡ್ಸ್ ಅಲ್ಲ ಅಂತಾದ್ರೆ ಅದು ಬರೀ timely ರಿಲೇಶನ್ಶಿಪ್ಪಾ ?? ಟೈಮ್ ಇದ್ರೆ ಇದ್ನೆಲ್ಲ ಸ್ವಲ್ಪ ಥಿಂಕ್ ಮಾಡಿ..
ಹೌದು.. ನಾನು ಹೇಳೋದಾದ್ರೆ ಫ್ರೆಂಡ್ಶಿಪ್ ಅನ್ನೋದು ಒಂಥರಾ timely ರಿಲೇಶನ್ .. ನಿಮ್ ಫ್ರೆಂಡ್ ಶಿಪ್ ನಿಮ್ಮ ಸ್ಟೇಟಸ್ ಮತ್ತು ಮೆಂಟಲ್ ಮಟುರಿಟಿಗೆ ಅನುಗುಣವಾಗಿ ಚೇಂಜ್ ಆಗ್ತಾ ಇರತ್ತೆ.. ಆದ್ರೇ ಕೆಲವರು ಮಾತ್ರ ಎಲ್ಲಾ ಟೈಮ್ ನಲ್ಲೂ ನಿಮ್ ಫ್ರೆಂಡ್ ಆಗೇ ಉಳಿತಾರೆ… ಅಂಥದ್ದು ಏನಿದ್ಯಲ್ಲ ಅದೇ ರಿಯಲ್ friendship .. ಆದ್ರೆ ಒಬ್ಬ ಮನುಷ್ಯನ ಜೀವಮಾನದಲ್ಲಿ ಅಂಥದ್ದು ಇರೋದು ಒಂದೋ ಎರಡೋ ಅಸ್ಟೇ..
ಈಗ ನಾನು ಹೇಳಿದ್ದನ್ನ ನೀವೇ ಒಮ್ಮೆ ಯೋಚನೆ ಮಾಡಿ.. ನಿಮ್ಮ ಚಡ್ಡಿ ದೋಸ್ತ್ ಆಫ್ childhood ಈವಾಗ ಸಿಕ್ದ ಅಂತ ಇಟ್ಕೊಳ್ಳಿ… ನಿಮಗೆ ನಿಜವಾಗಿ ಅವನತ್ರ ಮಾತಾಡೋಕೆ ವಿಷ್ಯನೇ ಇರಲ್ಲ..ಅಥವಾ ನಿಮಗೆ ಅವನನ್ನ ಮಾತಾಡಿಸಬೇಕು ಅಂತಾನು ಅನ್ಸಲ್ಲ… ಆದರೂ ನಾಮ್ ಕೆ ವಾಸ್ತೇ ಒಂದು ೧೦ ನಿಮಿಷ ಏನಾದರೂ ಲೋಕಾಭಿರಾಮ ಮಾತಾಡ್ಬೋದು.. ನಂತರ ಏನೂ ಇಲ್ಲ ಖಾಲಿ ಖಾಲಿ ಅನ್ಸತ್ತೆ… ಅದೇ ನಿಮ್ಮ childhood ನಲ್ಲಿ ನೀವು ಅವನತ್ರ ದಿನಗಟ್ಟಲೆ ಮಾತಾಡಿರ್ರ್ತೀರಿ… ಇದಕೆ ಕಾರಣ ಬೇರೇನಲ್ಲ.. ನಾನಾಗಲೇ ಹೇಳಿದ್ನಲ್ಲ.. ಸ್ಟೇಟಸ್/ಮೆಂಟಲ್ ಮಟುರಿಟಿ ಅಂತ… ಅದೇ…;) ಈವಾಗ ಹೇಳಿ.. ನಿಮಗೆ ಎಷ್ಟು ಜನ ರಿಯಲ್ ಫ್ರೆಂಡ್ಸ್ ಇದ್ದಾರೆ ಅಂತ?? ಫ್ರೆಂಡ್ಶಿಪ್ ಅನ್ನೋದು timely ರಿಲೇಶನ್ ಹೌದಾ ಅಲ್ವಾ??

Dedicated to all true friends...🙂

ಸೋ ನಿಮ್ ಎಲ್ಲಾ ರಿಯಲ್ ಫ್ರೆಂಡ್ಸ್ ಗೆ ಇವತ್ತು ನಿಜವಾಗಲೂ ಮನಸಾರೆ ವಿಶ್ ಮಾಡಿ… ಅವನನ್ನ ಎಷ್ಟು ಮಿಸ್ ಮಾಡ್ಕೊತ್ತೀದೀರ ಅಂತಾನು ಹೇಳಿ.. ಪಾಪ ಖುಷಿಯಗ್ತಾನೆ..!!!
ನಿಮ್ ಜೀವನದಲ್ಲಿ ಎಷ್ಟು ಜನ ಫ್ರೆಂಡ್ಸ್ ಇದ್ದಾರೆ ಅನ್ನೋದು importent ಅಲ್ಲ.. ನಿಮ್ ಇರೋ ಫ್ರೆಂಡ್ಶಿಪ್ ನಲ್ಲಿ ಎಷ್ಟು ಜೀವ ಇದೇ ಅನ್ನೋದೇ important ..!!

ಎಲ್ಲಾ ನನ್ ರಿಯಲ್ ಫ್ರೆಂಡ್ಸ್ ಗಳಿಗೂ friendship ಡೇ ಯಾ ಹಾರ್ದಿಕ ಶುಭಾಶಯಗಳು.. !!!

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ಮತ್ತೆ ನೆನಪಾದ ಶಂಕರನಾಗ್… ಕೇಳದೆ ನಿಮಗೀಗ ??? March 1, 2011

Shankaranag the magic director...

ಹೌದು… ಬಹಳ ದಿನಗಳ ಮೇಲೆ ನಾನು ಬರೀತಾ ಇರೋ ಸಣ್ಣ ನೋಟ್ ಇದು… ಇವತ್ತು ಹೀಗೆ ಚಾನೆಲ್ ಚೇಂಜ್ ಮಾಡ್ತಾ ಇದ್ದಾಗ ಎಲ್ಲೋ ಒಂದು ಕಡೆ ಈ ಶಂಕರನಾಗ್ ಕಂಡರು… ಆಗಲಾದರೂ ಸುಮ್ನೆ ಇದ್ರೆ ನಿಮಗೆ ಇದನ್ನ ಓದೋ ತೊಂದ್ರೆ ತಪ್ತಾ ಇತ್ತೇನೋ??? ಆದ್ರೆ ನನ್ ಮನಸು ಕೇಳಬೇಕೆ??? ಹಾಗೆ ನೆಟ್ ಸರ್ಚ್ ಮಾಡಕ್ಕೆ ಸ್ಟಾರ್ಟ್ ಮಾಡೇ ಬಿಡ್ತು… ಅದಕ್ಕೆ ಈ ಲೇಖನ ಇಲ್ಲಿ ಬಂತು….
ಶಂಕರನಾಗ್ ಕರ್ನಾಟಕದ ಯಾವುದೋ ಒಂದು ಹಳ್ಳಿಯಲ್ಲಿ ಹುಟ್ಟಿ,(ಹೊನ್ನಾವರದ ಮಲ್ಲಾಪುರ) ಕಷ್ಟ ಪಟ್ಟು ಮೇಲೆ ಬಂದವರು… ಕನ್ನಡ ಚಿತ್ರರಂಗದಲ್ಲಿ ಬಹಳಸ್ಟು ಬದಲಾವಣೆಗಳನ್ನು ತರಲು ಪ್ರಯತ್ನ ಪಟ್ಟವರು… (ಇದಕ್ಕೆ ಸಾಕ್ಷಿ ಅವರ “ಇದು ಸಾಧ್ಯ” ಸಿನಿಮಾ).ಆದರೆ ಯಾಕೋ ವಿಧಿಗೆ ಅವರ ಏಳಿಗೆ ಸಹಿಸೋಕೆ ಆಗಿಲ್ಲ ಅನ್ಸುತ್ತೆ!!! ಸಿನಿಮಾ ದ ಜಪ ಮಾಡ್ತಾನೆ ವಾಹನ ಆಕ್ಸಿಡೆಂಟ್ ನಲ್ಲಿ ಅಪಾರ ಅಭಿಮಾನಿಗಳನ್ನ ಬಿಟ್ಟು ಹೋಗೆ ಬಿಟ್ರು….
ಇಸ್ಟೆಲ್ಲಾ ಪೀಠಿಕೆ ಕೊಟ್ಟು ಸುಮ್ನೆ ಬಿಡಕ್ಕಾಗಲ್ಲ… ಅದ್ಕೆ ನಂಗೆ ತುಂಬಾ ಇಷ್ಟ ಆಗಿರೋ ಅವ್ರ ಸಿನಿಮಾದ ಒಂದು ಗೀತೆಯ ಸಾಹಿತ್ಯನ ನಿಮಗೋಸ್ಕರ ಇಲ್ಲಿ ಕೊಡ್ತೀನಿ…
ಯಾವ್ದು ಅಂತಾನ??? ಹೇಳಿ ಕೇಳಿ ಒಬ್ಬ ಯುವಕ ಅವ್ರ ಇನ್ಯಾವ ಗೀತೆನ ಇಷ್ಟ ಪಡ್ಬೋದು ಹೇಳಿ?? ಹೌದು.. ನೀವು ಅಂದ್ಕೊಂಡಿರೋದು ಸರಿ.. ಅದು ೧೯೮೧ ರಲ್ಲಿ ಬಂದ (ನಾನು ಹುಟ್ಟಿದ ವರ್ಷ ಅದು ಅನ್ನೋದು ಬೇರೆ ವಿಷ್ಯ) “ಗೀತ” ಸಿನಿಮದ, ಹುಚ್ಚು ಹಿಡಿಸೋ ಹಾಡು.. “ಕೇಳದೆ ನಿಮಗೀಗ …” ಇದನ್ನ ಬರ್ದಿರೋದು ಚಿ.ಉದಯಶಂಕರ್… ಹಾಗೆ ಮನದಲ್ಲೇ ಗುನುಗುನಿಸುತ್ತ ಓದಿ ಆನಂದಿಸಿ…
ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಹಾಡು ಹೇಳಿದಂತೆ ಒಂದು ಹೆಣ್ಣಿನ ..
ಓ ಓ ಓ ಒಂದು ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ…

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು . …
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯೂ ಅಲ್ಲೊಂದು ..
ಈ ಊರ ಚೆಲುವೆ ಆ ಊರ ಚೆಲುವ
ನದಿ ಅಂಚಲಿ ಓಡಾಡುತ ಎದುರಾದರು ಒಮ್ಮೆ …
ಕೇಳದೆ ನಿಮಗೀಗ ದೂರದಲ್ಲಿ ಯಾರೋ…

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಳವಿಂದಲಿ
ಒಂದಾದರು ಆಗ ……..
ಕೇಳದೆ ನಿಮಗೀಗ ದೂರದಲ್ಲಿ ಯಾರೋ…

ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ
ಹಿಂದಿನಿಂದ ದ್ವೇಷ ಒಬ್ಬರನೊಬ್ಬರು ಕೊಲ್ಲುವಷ್ಟು ಆಕ್ರೋಶ
ಹೀಗಿದ್ದರು ಆ ಪ್ರೇಮಿಗಳು ಹೆದರಲಿಲ್ಲ
ದಿನ ರಾತ್ರಿ ಊರೆಲ್ಲ ಮಲಗಿದಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ
ಹುಲಿಯಂತೆ ಎಗರಾಡಿ …
ಸೇತುವೆಯ ಬಳಿ ಬಂದಾಗ ಪ್ರೇಮಿಗಳ ಕಂಡಾಗ
ರೋಷದಲಿ ಕೂಗಾಡಿ …. ಹಲ್ಲನ್ನು ಮಸೆದ ಸೇತುವೆಯ ಕಡಿದ ….

ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ

ಕೇಳದೆ ನಿಮಗೀಗ ದೂರದಲ್ಲಿ ಯಾರೋ…
ಲ ಲ ಲ ಲ ಲ ಲ ಲಾ ಲಾ ಲಾ …ಓ ಓ ಓ ಓ ..ಲ ಲ ಲ ಲ ಲ ಲಾ ಲಾ ಲಾ

ಅಯ್ಯೋ * ಮಾರ್ಕ್ ಹಾಕೋದನ್ನ ಮರ್ತೇ ಬಿಟ್ಟಿದ್ದೆ…!!!! ಹೌದು.. ಇದನ್ನ ಓದ್ತಾ ಅನುಭವಿಸಿದಾಗ ನಿಮ್ಮ ಹಾರ್ಟ್ಗೆ ಆಗೋ ಯಾವುದೇ ತೊಂದರೆಗಳಿಗೆ ನಾನು ಜವಾಬ್ದಾರನಲ್ಲ!!!!

ಮುಂದಿನ ಸಲ ಸಿಗೋವರ್ಗೂ namskara…
ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ!!!!! July 11, 2010

ಹಾಯ್ ಗೆಳೆಯರೇ … ನಂಗೆ ಇತ್ತೀಚಿಗೆ ಒಳ್ಳೆಯ ಹಾಡುಗಳಿಗೆ ಕಿವಿಗೊಡಲು ಸಾಕಷ್ಟು ಸಮಯ ಸಿಗ್ತಾ ಇಲ್ಲ.. ಆದರೂ ಇವತ್ಯಾಕೋ ಹಾಗೆ “ಆನಂದಕಂದ” ಚಿತ್ರದ “ನೀನಿದ್ದರೇನು ಹತ್ತಿರ” ಗೀತೆನ ಕೇಳ್ತಾ ಇದ್ದೆ… ಆಗ ಇದರ ಸಾಹಿತ್ಯಾನ ಯಾಕೆ ನಿಮ್ಜೊತೆ ಹಂಚ್ಕೊಬಾರ್ದು ಅಂತ ಅನ್ನಿಸ್ತು… ಅದ್ಕೇನೆ ಇಲ್ಲಿ ಅದನ್ನ ಕೊಟ್ಟಿದ್ದೀನಿ… ಮನಸಾರೆ ಓದಿ… ಸಾಧ್ಯ ಆದ್ರೆ ಗೀತೇನ ಟ್ಯೂನ್ ಮಾಡ್ಕೊಳ್ಳಿ…
ಅಂದ ಹಾಗೆ ಇದನ್ನ ಹಾಡಿರೋದು “ಪಿ ಸುಶೀಲಾ” ಹಾಗು ಸಂಗೀತ ನೀಡಿರೋರು “ವಿಜಯ ಭಾಸ್ಕರ್”

ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ
ಈ ಅಗಲಿಕೆ ಇನ್ನೇತಕೆ ನೀನನ್ನ ಅರಿತ ನಂತರ
ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ
ಈ ಅಗಲಿಕೆ ಇನ್ನೇತಕೆ ನೀನನ್ನ ಅರಿತ ನಂತರ

ಹೂಬಳ್ಳಿಗೆಲ್ಲಿ ಆಸರೆ ಆಧಾರ ಮರವೇ ತೊರೆದರೆ
ಹೂಬಳ್ಳಿಗೆಲ್ಲಿ ಆಸರೆ ಆಧಾರ ಮರವೇ ತೊರೆದರೆ
ನಂಬಿದ ದೈವ ಮುನಿದರೆ ಈ ಹೆಣ್ಣಿಗೆಲ್ಲಿ ಆಸರೆ

ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ
ಈ ಅಗಲಿಕೆ ಇನ್ನೇತಕೆ ನೀನನ್ನ ಅರಿತ ನಂತರ

ಹೃದಯ ಹಗೆಯ ದೂಡದೆ ಒಲವು ಅಲ್ಲಿ ಮೂಡದೆ
ಹೃದಯ ಹಗೆಯ ದೂಡದೆ ಒಲವು ಅಲ್ಲಿ ಮೂಡದೆ
ನಗೆಯ ಹೊನಲು ಹರಿಯದೆ ನಮ್ಮ ಬಾಳು ಬೆಳಗದೆ

ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ
ಈ ಅಗಲಿಕೆ ಇನ್ನೇತಕೆ ನೀನನ್ನ ಅರಿತ ನಂತರ

ಇಲ್ಲಿ ಒಬ್ಬಳು ಹುಡುಗಿ ತನ್ನ ಇನಿಯನ ಬಗ್ಗೆ ಹಂಚ್ಕೊಳ್ಳುತ್ತಿರೋ ಭಾವನೆ ನಿಜಕ್ಕೂ ಸಾಲಿಡ್ …. ನಂಗೆ ಇದನ್ನ ಬರ್ದಿರೋರು ಯಾರು ಅಂತ ನಿಜಕ್ಕೂ ಗೊತ್ತಿಲ್ಲ… ಬಟ್ ಅವ್ರಿಗೆ Hatsoff ಅಂತೂ ಹೇಳ್ಲೇ ಬೇಕು… ಏನಂತೀರ????

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ಕೃಷ್ಣನ್ Love Story… ಸಿಕ್ಕಾಪಟ್ಟೆ ಫೀಲಿಂಗು ಮಗಾ….. June 27, 2010

ಸಕ್ಕತ್ ಫೀಲಿಂಗ್ ಮಗಾ!!!

ಶಶಾಂಕ್ ಇನ್ನೊಮ್ಮೆ ತಾವ್ಯಾಕೆ ನಿಜವಾದ ನಿರ್ದೇಶಕ ಅಂತ ತೋರ್ಸಿರೋ ಸಿನಿಮಾ ಅಂದ್ರೆ ಇದು… ಕೃಷ್ಣನ್ ಲವ್ ಸ್ಟೋರಿ…. ಮೊಗ್ಗಿನ ಮನಸ್ಸು ಕೇವಲ ಆಕಸ್ಮಿಕ ಅಲ್ಲ ಅನ್ನೋದನ್ನ ಇಲ್ಲಿ ಅವರು prove ಮಾಡಿದ್ದಾರೆ. ಫೀಲಿಂಗ್ ಇರೋರೆಲ್ಲಾ ಒಮ್ಮೇ ನೋಡ್ಳೇ ಬೇಕಾದ ಚಿತ್ರ ಇದು ಅಂತ ಹೇಳಿದ್ರೆ ಖಂಡಿತಾ ತಪ್ಪಾಗಲ್ಲ!!!!

ಕಥೆಯೇನೋ ಸಾಮಾನ್ಯವಾಗೇ ಇದೆ, ಕೆಳ ಮದ್ಯಮ ವರ್ಗದ ಜನರ ಭಾವನೆಗಳು ಮತ್ತು ತಾಕಲಾಟಗಳ ನಡುವೆ ಗಿರಕಿ ಹೊಡೆಯುತ್ತಾ ಇರತ್ತೆ, ಆದ್ರೆ ಅದನ್ನ 2.30 ತಾಸು ಶಶಾಂಕ್ ಕಟ್ಟಿಕೊಟ್ಟಿರೋ ರೀತಿ ಮಾತ್ರ ವಿಭಿನ್ನ. ಅದಕ್ಕೇ ಇದು 10 ರ ಜತೆ 11 ಅನ್ನಿಸಿಕೊಳ್ಳದೇ ಸರಾಗವಾಗಿ ನೋಡಿಸಿಕೊಂಡು ಹೋಗತ್ತೆ. ಇಲ್ಲಿ ಹುಡುಗ ಹುಡುಗಿ ಇಬ್ಬರೂ ಬಡತನದಿಂದ ಬಂದವರು, ಅದು ಹೇಗೋ ಪರಿಚಯವಾಗುತ್ತಾರೆ, ಪ್ರೀತಿ ಆರಂಭವಾಗುತ್ತೆ…. ಬೇರೆ ಬೇರೆ ಸನ್ನಿವೇಷಗಳಿಂದಾಗಿ ಅದು ಬೆಳೆಯುತ್ತೆ. ಇದರ ಮಧ್ಯೆ ಇನ್ನೊಬ್ಬ ಶ್ರೀಮಂತ ಹುಡುಗನ ಪ್ರವೇಶದಿಂದಾಗಿ ಕಥೆ ಅನಿರೀಕ್ಷಿತ ತಿರುವು ಪಡೆಯುತ್ತೆ!!!! ಅಲ್ಲಿಗೆ ಅದು ತ್ರಿಕೊನ ಪ್ರೇಮಕಥೆ ಅಂತ ಜನ ಅಂದ್ಕೊಳ್ಳೋ time ಗೆ ಶಶಾಂಕ ಕಥೆಗೆ ಬೇರೇನೇ ಆಯಾಮ ಕೊಡ್ತಾರೆ. ಒಟ್ನಲ್ಲಿ ಪ್ರೇಕ್ಷಕ ಮುಂದೇನಾಗುತ್ತೆ ಅಂತ ಅಂದ್ಕೋತಾನೋ ಅದು ಆಗಲ್ಲ… ಆದ್ರೆ ಅಲ್ಲೇನು ಆಗತ್ತಲ್ಲ ಅದು ಸರಿಯಾಗೆ ಇದೆ ಅಂತ ನೀವು ಒಪ್ಕೊಳ್ಳೋ ಥರಾ ಸಿನಿಮಾನಾ ಮಾಡಿರೋದು ನಿರ್ದೇಶಕರ ಬುದ್ಧಿವಂತಿಕೆಗೆ ಸಾಕ್ಷಿ!!!!

ಸಂತೆಯಲ್ಲಿ ನಿಂತರೂನೂ.......


ಇಲ್ಲಿ ಉಳಿದೆಲ್ಲಾ ಪಾತ್ರಗಳಿಗಿಂತ ನಿಮಗೆ ನೆನಪಲ್ಲಿ ಉಳಿಯೋದು ಅಂದ್ರೆ ರಾಧಿಕಾ ಪಂಡಿತ್… ಅವಳು ಇಲ್ಲಿ ನಟಿಸಿದ್ದಾಳೆ ಅನ್ನೋಕಿಂತ ಆ ಪಾತ್ರಾನೇ (ಗೀತಾ) ಆಗಿದ್ದಾಳೆ ಅನ್ನೋದೇ ವಾಸಿ…. ಹೇಳ್ಬೇಕಂದ್ರೆ ಸದ್ಯಕ್ಕೆ ಕನ್ನಡದಲ್ಲಿ ಯಾವ ನಾಯಕೀನೂ ಈ ಥರ involve ಆಗಿ ಒಂದು ಪಾತ್ರ ಮಾಡಿರೋದು ನನಗಂತೂ ಗೊತ್ತಿಲ್ಲ!!! ಆದರೆ ಬಾಕಿ ಉಳಿದ ಪಾತ್ರಗಳ ಬಗ್ಗೆ ಇದೇ ಮಾತನ್ನ ಹೇಳಕ್ಕಾಗಲ್ಲ. ಅಜಯ್ ಅಂತೂ ನಟನೆಯೇ ಬರದವರ ಥರಾ ನಟಿಸಿರೋದು ಇದರ ಮೈನಸ್ ಪಾಯಿಂಟ್. ಅವರು ಇನ್ನೂ ಬಹಳಷ್ಟು ಪಳಗಬೇಕು… ಇದರಿಂದಾಗೇ ಇಂಥಾ ಒಳ್ಳೇ ಸಿನಿಮಾ ಕೂಡಾ ನಿಮ್ಗೆ ಸ್ವಲ್ಪ ಬೋರ್ ಹೊಡ್ಸತ್ತೆ ಅಂದ್ರೂ ತಪ್ಪಲ್ಲ!!! ಇನ್ನು ಉಳಿದ ಪಾತ್ರಗಳು ಯಾವುದೂ ನೆನಪಲ್ಲಿ ಉಳಿಯೋ ಸಾಧ್ಯತೆ ಕಡಿಮೆ, ಅದಕ್ಕೆ ಅವಕಾಶಾನೂ ನಿರ್ದೆಶಕರು ಕೊಟ್ಟಿಲ್ಲ ಬಿಡಿ.

ಒಟ್ನಲ್ಲಿ ಈ ಸಿನಿಮಾದಲ್ಲಿ ಶಶಾಂಕ್ ಮತ್ತೊಮ್ಮೆ ಕೆಳಮಧ್ಯಮ/ಮಧ್ಯಮ ವರ್ಗದ ಹುಡುಗಿಯರ ಬಾವನೆಗೆಳ ಬಗ್ಗೆ ಹೇಳಿದ್ದಾರೆ.. ಈ ಸಮಾಜದಲ್ಲಿ ಒಬ್ಬಳು ಹುಡುಗಿ ಬದುಕಲು ಪಡಬೇಕಾದ ಕಷ್ಟಗಳನ್ನ ಬಿಚ್ಚಿಟ್ಟಿದ್ದಾರೆ, ಅವಳು ಯಾವ ಥರಾ ಪರಿಸ್ಥಿತಿಯ ಕೈಗೊಂಬೆಯಾಗುತ್ತಾಳೆ… ಯಾವ ಥರಾ ತನ್ನ ಭಾವನೆಗಳನ್ನ ಮುಚ್ಚಿಟ್ಟು ಬದುಕುತ್ತಾಳೆ… ಒಟ್ನಲ್ಲಿ ಎಲ್ಲಾ ಅಂದ್ರೆ ಎಲ್ಲಾನೂ ಹೇಳಿದ್ದಾರೆ… ರಾಧಿಕಾ ಅದಕ್ಕೆ ಜೀವ ತುಂಬಿದ್ದಾರೆ.

ಕ್ಲೈಮಾಕ್ಸ್ ತನ್ಕ ಬರೀ ಕಥೆಯಾಗಿದ್ದ ಸಿನಿಮಾ ಅಲ್ಲಿ ಜೀವನಾನೆ ಆಗ್ಬಿಡತ್ತೆ!!! ಯಾರೂ ಊಹಿಸಕ್ಕು ಅಗದೇ ಇರೋ ಥರಾ ತಿರುವು ಪಡ್ಕೊಳ್ಳತ್ತೆ… ಅಲ್ಲಿಗೆ ನಿಮ್ಗೆ ಒಂದು ಒಳ್ಳೇ Movie ನೋಡಿದಂತಾ ಭಾವನೆ/ಸಂತೋಷದ ಜತೆಗೆ ಹೊರಗೆ ಬರಕ್ಕೆ ಕೂಡಾ ಆಗತ್ತೆ. ನೀವು ಕೊಟ್ಟಿರೋ ದುಡ್ಡಿಗೆ ಈ ಸಿನಿಮಾ ಖಂಡಿತಾ ಮೋಸ ಮಾಡಲ್ಲ!!! ಇನ್ನು ಇದರಲ್ಲಿ ಕೊರಿಯೋಗ್ರಾಫಿ ಇರಬಹುದು, ಚಿತ್ರೀಕರಣ ಇರ್ಬೋದು ಎಲ್ಲಾನೂ ಅಚ್ಚುಕಟ್ಟು. ಅದಕ್ಕೇ ಚಿತ್ರದ ಪ್ರತೀ ಫ್ರೇಮು ಕೂಡಾ ಒಂದು ಚಿತ್ತಾರ. ಕಿವಿಗಿಂಪಾದ ಸಂಗೀತ… ಕಣ್ಣಿಗಿಂಪಾದ ಚಿತ್ರೀಕರಣ!!! ಒಂದೆರಡು ಹಾಡುಗಳು ಚಿತ್ರಮಂದಿರದಿಂದ ಹೊರಗಡೆ ಬಂದಮೇಲೂ ನೆನಪಲ್ಲಿ ಉಳಿಯತ್ತೆ ಅದಕ್ಕೆ ಕಾರಣ ಸಂಗೀತ ನಿರ್ದೇಶಕ ಶ್ರೀಧರ್…

ಜೀವಗಳ ಭಾಷೆ ಇದು ಬೇಕೆ ಅನುವಾದ????


ಒಟ್ಟಿನಲ್ಲಿ ಒಮ್ಮೆ ನೋಡಲೇ ಬೇಕಾದ ಚಿತ್ರ ಅಂತಂದ್ರೆ ಖಂಡಿತಾ ತಪ್ಪಲ್ಲ.. ಸಮಯ ದುಡ್ಡು ಇದ್ದು ಮನರಂಜನೆ/ಫೀಲಿಂಗು ಬೇಕಂದ್ರೆ ಮಿಸ್ ಮಾಡ್ಕೊಳ್ದೇ ಈ LOVE STORY ನಾ ನೋಡಿ..
ಹೃದಯವೇ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯೆ ನೆನಪಲೆ ನೆನೆಯುವೆ
ಸಳತಕೇ ಸೋಲುತ ಸನಿಹಕೆ ಕಾಯುವೆ…
ಅಂತ ಗುನುಗುತ್ತಾ ನೀವು ಹೊರ್ಗಡೆ ಬರ್ತೀರಾ ಅಂತನ್ನೋದು ಶಶಾಂಕ್ ಮಾತ್ರ ಅಲ್ಲ ನನ್ನ ನಂಬಿಕೆ ಕೂಡಾ….

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ಇದೇನಾ ಸಭ್ಯತೆ…. ಇದೇನಾ ಸಂಸ್ಕೃತಿ…??? March 29, 2010

ಯಾಕೋ ಒಂದೆರಡು ದಿನಗಳಿಂದ ನನ್ನ ಮೂಡ್ ಅಷ್ಟೇನು ಸರಿ ಇರಲಿಲ್ಲ…. ಯಾಕೆ ಅಂತ ಕೇಳಿದ್ರೆ ಅದ್ಕೆ ಸರಿ ಉತ್ತರ ನನ್ನತ್ರ ಅಂತೂ ಖಂಡಿತಾ ಇಲ್ಲ!!! ಹೀಗೆ ಏನು ಮಾಡೋಣ ಅಂತ ಹಳೇ ಮಧುರ ಗೀತೆಗಳಿಗೆ ಕಿವಿಯಾದಾಗ ನಂಗೆ ಇವತ್ತು ಸ್ವಲ್ಪ ಹಿತ ನೀಡಿರುವುದು “ಮಣ್ಣಿನ ಮಗ” ಚಿತ್ರದ (ದೇವೇಗೌಡರ ಬಗ್ಗೆ ಇರೋ ಚಿತ್ರ ಖಂಡಿತಾ ಅಲ್ಲ).. ಗೀತಪ್ರಿಯಾ ಅವರ, ಪಿ ಸುಶೀಲಾ ಅವರು ಹಾಡಿದ “ಇದೇನಾ ಸಭ್ಯತೆ…. ಇದೇನಾ ಸಂಸ್ಕೃತಿ..” ಗೀತೆ… ಸ್ವಲ್ಪ ಕಾಂಗ್ರೆಸ್ ನ ಬಗ್ಗೆ ಇರೋ ಗೀತೆ ಥರಾ ಇದ್ರೂ…. ಇದರಲ್ಲಿ ಇನ್ನೂ ಹೆಚ್ಚಿನ ಅರ್ಥ ಅಡಗಿರೋದಕ್ಕೆ ಇದು ಖುಷಿಯಾಗೋದು…
ಇಲ್ಲಿ ನಿಮ್ಗೋಸ್ಕರ ಆ ಗೀತೆಯು ಸಾಹಿತ್ಯಾನಾ ಕೊಡ್ತಾ ಇದ್ದಿನಿ..
ಇದೇನ ಸಭ್ಯತೆ ಇದೇನ ಸಂಸ್ಕೃತಿ
ಇದೇನ ಇಂದು ಸತ್ಯಕೆ ಇದೇನ ನಮ್ಮ ಜಾಗೃತಿ
ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ

ಎನಿತು ದೇಶ ಭಕ್ತರು ಹರಿಸಿ ತಮ್ಮ ನೆತ್ತರು
ದಾಸ್ಯದಿಂದ ನಮ್ಮನು ಬಿಡಿಸಿ ಅಮರರಾದರು
ಅಮರರಾಮರಾಜ್ಯದ ಕನಸು ಕಂಡೆವಂದು
ಬರಿಯ ಭೇದಭಾವವ ಕಾಣುತಿಹೆವು ಇಂದು

ದೇಶವನ್ನು ಕಾಯುತಿಹರು ಗಡಿಗಳಲ್ಲಿ ಯೋಧರು
ನಮಗೆ ಅನ್ನ ನೀಡಲು ದುಡಿಯುತಿಹರು ರೈತರು
ಅವರ ತ್ಯಾಗ ದುಡಿಮೆಯ ಪರಿವೆ ನಮಗೆ ಇಲ್ಲ
ಗಾಂಧಿ ನೆಹರು ಶಾಸ್ತ್ರಿಯನ್ನು ನಾವು ಮರೆತೆವಲ್ಲ

ದೇಶದ ಸಮಸ್ಯೆಗಳು ಇರಲು ಕೋಟಿ ಕೋಟಿ
ಅದನು ಮರೆತು ಸಾಗಿದೆ ಫ್ಯಾಶನ್ನಿನ ಪೈಪೋಟಿ
ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆ ಇಲ್ಲ
ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲ

ಪೂರ್ತಿ ಓದಿದಾಗ ಹೌದು ಅನ್ನಿಸದೇ ಇರೋಕೆ ಸಾಧ್ಯಾನೇ ಇಲ್ಲ ಅಲ್ವಾ???
ಹಾಗಂತ ನಾವು ಎಲ್ಲಾನೂ ಪಾಲ್ಸೊಕೆ ಹೋಗೋದು ಅಷ್ಟು ಸರಿ ಇರಲ್ಲ ಏನಂತೀರಾ??? ಇದನ್ನ ಹಾಗೇ ಯೋಚಿಸ್ತಾ ಇದ್ದಾಗ ನಂಗೆ ಚಿಕ್ಕಂದಿನಲ್ಲಿ ನಾನು ಓದಿರೋ ಒಂದು ಕಥೆ ನೆನ್ಪಿಗೆ ಬರ್ತಾ ಇದೆ… ಅದ್ರಲ್ಲಿ ಜೀವನದಲ್ಲಿ ನಾವು ಹೇಗಿರ್ಬೇಕು ಅನ್ನೋದನ್ನ ಸಖತ್ತಾಗಿ ಹೇಳಿದ್ದಾರೆ… ಅದು ಇನ್ನೂ ನನ್ನ ಮನ್ಸಲ್ಲಿ ಇರೊದಕ್ಕೆ ನಾನು ಅದನ್ನ ಫಾಲೋ ಮಾಡ್ತ ಇರೋದು ಕೂಡಾ ಒಂದು ಕಾರಣ ಆಗಿರೋ ಸಾಧ್ಯತೇನಾ ತಳ್ಳಿ ಹಾಕಕ್ಕೆ ಅಂತು ಆಗಲ್ಲ… ಇರ್ಲಿ ಅದನ್ನ ಕೂಡಾ ಇಲ್ಲೇ ಹೇಳಿ ಬಿಡ್ತೀನಿ..
ಒಂದೂರು.. ಹೆಸ್ರೇನು ಬೇಕಾಗಿಲ್ಲ ಬಿಡಿ, ಅಲ್ಲಿ ಒಬ್ಬ ಸಂನ್ಯಾಸಿ… ಸಂನ್ಯಾಸಿ ಅಂದ್ಮೆಲೆ ಅವನ ಜೀವನ ಸರಳವಾಗಿ ಇರ್ಲೇ ಬೇಕು..(ಈಗ ಕೆಲವರು ಬೇರೆ ಥರ ಇದ್ರೂ ನಮ್ಮ ಕಥಾ ನಾಯಕ ಆ ಥರ ಏನೂ ಅಲ್ಲ!!!!).. ಊರಲ್ಲಿ ಜನ,ದನ, ಎಲ್ಲಾ ಊರುಗಳಲ್ಲಿ ಯಾವ ಥರಾ ಇರತ್ತೋ ಅದೇ ಥರ ಇರತ್ತೆ. ಸಂನ್ಯಾಸಿ ವಾಸವಿರೋ ಪ್ರದೇಶದಲ್ಲಿ ಒಂದು ನದಿ ಹರೀತಾ ಇರತ್ತೆ, ಅದು ಒಂದು ಮಳೆಗಾಲದ ಸಮಯ,… ನದಿ ತುಂಬಿ ಹರೀತಾ ಇದೆ… ಇದರ ಮಧ್ಯೆ ನಮ್ಮ ಕಥಾ ನಾಯಕ ಸಂನ್ಯಾಸಿ ಹರಿಯುತ್ತಿರೋ ನದೀ ನೀರಿನಲ್ಲಿ ನಿಂತು ತುಂಬ ಹೊತ್ತಿನಿಂದ ಏನೋ ಮಾಡ್ತಾ ಇದ್ದಾನೆ… ಯಾರೋ ಒಂದಿಬ್ಬರು ಊರಿನವ್ರು ಇದನ್ನ ದೂರದಿಂದ ನೋಡ್ತಾ ನಿಂತಿದ್ರು… ಏನೂ ಅರ್ಥ ಆಗ್ತಿಲ್ಲ ಪಾಪ ಅವ್ರಿಗೆ!!! ಅದಕ್ಕೆ ಸ್ವಲ್ಪ ಹತ್ರ ಬಂದು ನೋಡ್ತಾರೆ… ಏನಾಶ್ಚರ್ಯ ಅಂತೀರಾ… ಈ ಸಂನ್ಯಾಸಿ ನೀರಿನಲ್ಲಿ ಕೊಚ್ಚಿ ಹೋಗ್ತಾ ಇರೋ ಒಂದು ಚೇಳನ್ನ ನೀರಿನಿಂದ ಕಾಪಾಡೋ ಪ್ರಯತ್ನ ಮಾಡ್ತಾ ಇದ್ದಾನೆ!!! ಅವನು ಅದನ್ನ ನಿಧಾನವಾಗಿ ಬೊಗಸೆಯಲ್ಲಿ ಎತ್ಕೊಂಡು ನೀರಿನಿಂದ ಹೊರ ತೆಗೆಯೋಷ್ಟರಲ್ಲಿ ಅದು ಪಾಪ ತನ್ನ ಸ್ವಭಾವದಂತೆ ಇವ್ನ ಕೈಗೆ ಕುಟುಕ್ತಾ ಇದೆ… ಇವ್ನು ನೋವಿನಿಂದ ಅದನ್ನ ಕೆಳಕ್ಕೆ ಹಾಕ್ತಾನೆ!!! ವಾಪಾಸ್ ಅದನ್ನ ನೀರಿಂದ ಮೇಲಕ್ಕೆ ತೆಗೆಯೋ ಅದೇ ಪ್ರಯತ್ನ!!!! ಇದು ಹಲವಾರು ಬಾರಿ ನಡೆದು ಕೊನೆಗೂ ಸಂನ್ಯಾಸಿ ಅದನ್ನ ದಡಕ್ಕೆ ತಂದು ಹಾಕೋಲ್ಲಿ ಸಫಲನಾಗ್ತಾನೆ…
ಆಗ ಅಲ್ಲಿದ್ರಲ್ಲ ಇಬ್ರು ಕುತೂಹಲಿಗಳು… ಕೇಳೇ ಬಿಡ್ತಾರೆ.. ಅಲ್ಲ ಸ್ವಾಮಿ ಇಷ್ಟು ದಿನ ನೀವು ಕೇವಲ ಒಬ್ಬ ಸಂನ್ಯಾಸಿ ಅಂತ ಅನ್ಕೊಂಡಿದ್ವಿ… ಆದ್ರೆ ನಿಮ್ಗೆ ಹುಚ್ಚು ಕೂಡಾ ಇದೆ ಅಂತ ನಮ್ಗೆ ಗೊತ್ತಿರ್ಲಿಲ್ಲ ???
ಅದ್ಕೆ ಸಂನ್ಯಾಸಿ ಹೇಳ್ತಾನೆ… ಅಲ್ಲಪ್ಪ.. ನಾನು ಸಂನ್ಯಾಸಿ.. ಇನ್ನೊಬ್ರಿಗೆ ಉಪಕಾರ/ಸಹಾಯ ಮಾಡೋದು ನನ್ನ ಸ್ವಭಾವ.. ಹಾಗೆ ಅದೊಂದು ಚೇಳು.. ಸಿಕ್ಕಿದಾಕ್ಷಣ ಕಡಿಯೋದು ಅದರ ಸ್ವಭಾವ.. ಅದರ ಸ್ವಭಾವ ಬೇರೆ ಇದೆ ಅಂತಂದು ನಾನು ನನ್ನ ಸ್ವಭಾವಾನಾ ಬಿಡಕ್ಕಾಗುತ್ತಾ????

ಇದು ಒಂದು ಕಥೆ ಇರ್ಬೋದು… ಆದ್ರೆ ಯೋಚ್ನೆ ಮಾಡಿ.. ಬೇರೆಯವರು ಹೇಗೋ ಇದ್ದಾರೆ ಅಂತ ನಾವೆಲ್ಲಾ ನಮ್ಮ ಸ್ವಭಾವಾನಾ ಬದಲಿಸ್ಕೊಂಡ್ರೆ ಹೇಗಿರ್ಬಹುದು???
ಇಲ್ಲಿ ನಾನು ಎರಡು ಬೇರೆ ಬೇರೆ ವಿಷ್ಯಾನಾ ಹೇಳಿದ್ದೀನಿ… ಆದ್ರೆ ಎರಡರಲ್ಲೂ ಅಡಕವಾಗಿರೋ ಗೂಢಾರ್ಥ ಹೆಚ್ಚು ಕಡ್ಮೆ ಒಂದೇ…

ಹೇಳಿ ನಾವು ಸಭ್ಯರಾಗಿರ್ಬೇಕಾ… ಸಂಸ್ಕೃತೀನಾ ಫಾಲೋ ಮಾಡ್ಬೇಕಾ.. ಅಥವಾ ಇನ್ಯಾರು ಬೇಕಿದ್ರೂ ಇರ್ಲಿ ನಾನಿರೋದೇ ಹೀಗೆ ಅಂತಾ ಜೀವಿಸ್ಬೇಕಾ???
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

ಇದರಂತೆ ಬದುಕಿರುವಷ್ಟು ದಿನ ಎಲ್ಲರಿಗೂ ಬೇಕಾದವನಾಗಿ, ಸಹಕಾರಿಯಾಗಿ ಬದುಕುವುದೇ ಬದುಕು… ಏನಂತೀರಾ?????

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ನಾನೂ ಬರೀಬೇಕು…. !!! March 25, 2010

ಬರಿಯೋದು ಒಂದು ಕಲೆ.. ಅದೇ ರೀತಿ ಕೊರಿಯೋದು ಕೂಡಾ!!!!!

ಇದೇನಪ್ಪಾ ಇವ್ನು… ಆವತ್ತಿಂದ ಬರೀತಾನೇ (ಕೊರೀತಾನೇ) ಇದ್ದಾನೆ ಇನ್ನೇನಪ್ಪಾ ಇವ್ನ ಗೋಳು ಅಂತ ಅನ್ಕೋಬೇಡಿ… ನಾನು ಬರೀಬೇಕು ಅಂದ್ರೆ ಈ ಬ್ಲಾಗ್ ನ ಆಗಾಗ Update ಮಾಡ್ತಾ ಇರ್ಬೇಕು ಅನ್ನೋ ನನ್ನ ಆಸೆ ಮತ್ತು ಅದು ಹಾಗೇ ಉಳ್ದಿರೋ ಬಗ್ಗೆ ಹೇಳ್ಬೇಕು ಅಂತಾರೀ…
ನಂಗೆ ಇದನ್ನ ಕನಿಷ್ಠ ಅಂದ್ರು ವಾರಕ್ಕೊಮ್ಮೆ Update ಮಾಡ್ಬೇಕು ಅನ್ನೋ ಆಸೆ… ಆದ್ರೆ ಯಾಕೋ ಬರಿಯೋಕೇ ಆಗ್ತಿಲ್ಲ… ಇದು ಈಗ ಎಲ್ಲಿ ತನ್ಕ ಹೋಗ್ಬಿಟ್ಟಿದೆ ಅಂದ್ರೆ ನನ್ನ ಗೆಳೆಯರು/ಹಿತೈಷಿಗಳು ಯಾಕೆ ಬ್ಲಾಗ್ Update ಆಗ್ತಿಲ್ಲ ಅಂತ ಕೇಳೋ ಮಟ್ಟಿಗೆ!!!! ಹೌದು ನಂಗೂ ಅನ್ನಿಸ್ತಾನೇ ಇದೆ… ಇತ್ತೀಚೆಗೆ ನಾನು ಹೊಸ್ದನ್ನೇನು ಬರ್ದಿಲ್ಲ ಅಂತ… ಹಾಗಂತ ವಿಷ್ಯಗಳೇ ಇಲ್ಲ ಅಂತಲ್ಲ!!! ಸಾವ್ರ ವಿಷ್ಯ ಇದೆ… ಆದ್ರೆ ಬರ್ಯೋಕೆ ಆಗ್ತಾ ಇಲ್ಲ!!!!
ಹೌದೂರಿ ಬರ್ಯೋದು ಅಂದ್ರೆ ಸುಮ್ನೇನಾ… ಸಿಕ್ಕಾಪಟ್ಟೆ ಕಷ್ಟಾರಿ… ಮಾತಾಡೋದಾದ್ರೆ ಹಾಗೆ ಮಾತಾಡ್ತಾ ಹೋಗ್ಬಹುದು… ಆದ್ರೆ ಈ ಬರ್ಯೋದು ಇದೆ ನೋಢಿ ಅದು ಬಹಳ ಕಷ್ಟ.. ಬರೀಬೇಕಿದ್ರೆ mood ಇರ್ಬೇಕು, ತಲೆಯಲ್ಲಿ ಸಿಕ್ಕಾಪಟ್ಟೆ ಯೋಚನೆ/ಯೋಜನೆಗಳು ಹರಿದಾಡ್ತಾ ಇರ್ಬೇಕು, ಯಾವ್ದೇ disturbance ಇರ್ಬಾರ್ದು… ಇತ್ಯಾದಿ ಇತ್ಯಾದಿ ಕಂಡೀಷನ್ನುಗಳು…
ಈಗ ನನ್ ಬಗ್ಗೆ ಹೇಳ್ಬೇಕಂದ್ರೆ.. ನಂಗೆ ಸಮಯದ ಕೊರ್ತೆ ಅಂತು ಸದ್ಯಕ್ಕೆ ಇಲ್ಲ, ಯೋಚನೆ/ಯೋಜನೆಗಳ ಕೊರ್ತೆನೂ ಇಲ್ಲ… ಆದ್ರೆ ಬರ್ಯೋಕೆ ಮುಖ್ಯವಾಗಿ ಇರ್ಬೇಕಲ್ಲ… (ಪೆನ್ನು ಮತ್ತು ಇಂಕ್ ಅಲ್ಲಾರಿ) ಮೂಡ್ ಅಂತಾರಲ್ಲ ಮೂಡ್ ಅದೇ ಬರ್ತಾ ಇಲ್ಲ!!!! ಆದ್ರೆ ನನ್ friends ಹೇಳೋದೇ ಬೇರೆ… (ಅವ್ರಿಗೆ ನನ್ ಕಾಲು ಎಳೆಯೋದು ಬಿಟ್ರೆ ಬೇರೆ ಏನಿದೆ ಕೆಲ್ಸ ಹೇಳಿ!!!) ನಾನು ಅದೇನೋ ಅಂತಾರಲ್ಲ SMS ಅಂತ… ಅದನ್ನ ಕಡ್ಮೆ ಮಾಡ್ಕೋಬೇಕಂತೆ… (SMS= ಚರ ದೂರವಾಣಿಯಿಂದ ಚರದೂರವಾಣಿಗೆ ಕಳುಹಿಸೋ ಅಕ್ಷರ ಸಂದೇಶ…)… ಅಲ್ಲ ನಂಗೆ ಇರೋದೇ 200 ಉಚಿತ SMS, ಅದನ್ನು ಕೂಡಾ ಉಪಯೋಗ್ಸಿಲ್ಲ ಅಂದ್ರೆ ಹೆಗೆ ಅಲ್ವಾ??? (ದುಡ್ಡೆಲ್ಲಾದ್ರು ಹೋಗತ್ತೆ ಅಂದ್ರೆ ನಾನು SMS ಕಳ್ಸೋದೇ ಇಲ್ಲ,,, ಅದು ಬೇರೆ ವಿಷ್ಯ!!!)
ಹೋಗ್ಲಿ ಬಿಡಿ… ಈಗ ಅದೆಲ್ಲಾ ಏನಕ್ಕೆ.. ನಾನಂತೂ ಇವತ್ತಿಂದ, ಯಾಕೆ ಈಗಿಂದಾನೇ ಒಂದು decide ಮಾಡ್ಬಿಟ್ಟಿದ್ದೀನಿ… ವಾರಕ್ಕೆ ಒಂದಾದ್ರೂ ಪೋಸ್ಟ್ ನನ್ನ ಬ್ಲಾಗ್ ನಲ್ಲಿರ್ಲೇ ಬೇಕು ಅಂತ.. ಅದನ್ನ ನಿಮ್ಗೆ ಹೇಳೋಣ ಅಂತ ಬಂದು ಇಷ್ಟೆಲ್ಲಾ ಕೊರ್ದೆ.. ಅಂದ್ರೆ ನಂಗೆ ಬರ್ಯೋಕೆ/ಕೊರ್ಯೋಕೆ ಬರತ್ತೆ ಅನ್ನೊದು Prove ಅಯ್ತಲ್ಲ!!! ಅಲ್ಲಿಗೆ ನನ್ನ ಇವತ್ತಿನ ಆಸೆ ಪೂರೈಸಿದ ಹಾಗೆ ಆಯ್ತು… ಬ್ಲಾಗ್ ನ ಸರಿಯಾಗಿ Update ಮಾಡದೆ ಇರೋದಕ್ಕೆ ನಿಮ್ಮಿಂದ ಒಂದು ಕ್ಷಮೆ ಯಾಚಿಸುತ್ತಾ ಮುಂದೆ ನಿಮ್ಗೆ ಯಾವ್ದೇ ತೊಂದ್ರೆ ಆಗದ ಥರಾ ನಿಮ್ಮ ತಲೆ ತಿನ್ನೋದನ್ನ ಮುಂದುವರಿಸುತ್ತೇನೆ ಅಂತ ಭರವಸೆ ಕೊಡ್ತಾ (BBMP ಚುನಾವಣೆ ಬಂತಲ್ಲಾ ಅದ್ಕೆ) ಇದಕ್ಕೆ ಸದ್ಯಕ್ಕೆ ಪೂರ್ಣವಿರಾಮ ಇಡುತ್ತಿದ್ದೇನೆ…

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

ಯುಗ ಯುಗಾದಿ ಕಳೆದರೂ….. (ವಿಕೃತಿ ನಾಮ ಸಂವತ್ಸರದ ಶುಭಾಷಯಗಳು) March 15, 2010

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.. ಹೊಸವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ...

ಹೌದು, ಯುಗಾದಿ ಅಥವಾ ಈ ಗುಡಿಪಾಡವ ಎಂದರೆ ಹಾಗೇನೇ… ಎಷ್ಟೇ ಯುಗಗಳು ಕಳೆದರೂ ವರುಷಕ್ಕೊಮ್ಮೆ ಬರಲೇ ಬೇಕು… ಅದಕ್ಕೆ ನಿಮಗೆ ನಾನು ಶುಭಾಷಯ ಹೇಳಲೇ ಬೇಕಲ್ವೆ??? ಕೆಳಗೆ ಈ ಯುಗಾದಿ ಬಗ್ಗೆ wikipedia ದಿಂದ ಸ್ವಲ್ಪ ಮಾಹಿತಿಗಳನ್ನ ಕದ್ದು ನಿಮಗಾಗಿ ಕೊಟ್ಟಿದ್ದೇನೆ…. ಕದ್ದಿದ್ರೂ ನನ್ನ ಇರಾದೆ ಒಳ್ಳೆಯದೇ ಆದ ಕಾರಣ ನೀವೆಲ್ಲಾ ಕ್ಷಮಿಸ್ತೀರಾ ಅಂತ ನಂಗೆ ಗೊತ್ತು ಬಿಡಿ…… ಹಾಗಾಗಿ ಈಗ ಸ್ವಲ್ಪ ಓದ್ಕೊಳ್ಳಿ…
ಹಿನ್ನೆಲೆ:
ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ವ್ಯುತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ, ಎಂದು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ.( ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ.) ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ ೦ – ೧೩:೨೦ ಭಾಗ(ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ.(ಇದನ್ನ ವಿಷು ಎಂದು ಕರ್ನಾಟಕದ ದಕ್ಷಿಣ ಭಾಗ ಮತ್ತು ಕೇರಳಗಳಲ್ಲಿ ಆಚರಿಸುತ್ತಾರೆ) ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಪುರಾಣ:
ಪುರಾಣದ ಪ್ರಕಾರ ಬ್ರಹ್ಮ ದೇವ ಯುಗಾದಿಯ ದಿನದಿಂದ ಅಂದರೆ ಚೈತ್ರ ಶುದ್ಧದ ದಿನ ಲೋಕದ ಸೃಷ್ಟಿ ಪ್ರಾರಂಭಿಸಿದಂತೆ. ಹಿಂದು ಜನಾಂಗಕ್ಕೆ ಯುಗಾದಿಯ ದಿನದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಸಹ ಇಂದಿನಿಂದಲೇ ಶುರುವಾಗುತ್ತದೆ. ಹೊಸ ಪಂಚಾಗ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ.
ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ ೧೫ ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗಗಳಿಗೆ ಯುಇಗವೆಂದರೆ ೫೦೦೦ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ. ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸುವರು.
ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ. ಇಂದಿನ ದಿನದಿಂದ ಚೈತ್ರ ಮಾಸ ಪ್ರಾರಂಭವಾಗಿ ತರು ಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.
ಆಚರಣೆ ಹೇಗೆ??? :
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.
ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೇಷ ತಿನಿಸು – ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಈಗೀಗ ಟಿವಿಯಲ್ಲಿ ಕವಿಗೋಷ್ಠಿಯೂ ಪ್ರಸಾರ ಮಾಡುವರು.
ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು.
ಬೇವು-ಬೆಲ್ಲ:
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.
ಬೇವು- ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||
ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ

ಅಬ್ಬ… ಅಂತೂ ನಿಮಗೆ ಸಾಕಷ್ಟು ಮಾಹಿತಿ ಒದಗಿಸಿರೋ ಧನ್ಯತಾಬಾವ ನನಗೆ… ನೀವೂ ಕೂಡಾ ನಿಮ್ಮವರೊಡನೆ ಈ ಯುಗಾದೀನಾ ಚೆನ್ನಾಗಿ ಆಚರಿಸಿ.. ಹೊಸ ವರುಷ ತರಲಿ ನಿಮಗೆಲ್ಲಾ ಹರುಷ… ಈ ನವ ಸಂವತ್ಸರದಲ್ಲಾದರೂ ಜಾಗತಿಕ ಶಾಂತಿ ನೆಲೆಸಲಿ… ಭಗವಂತ ಎಲ್ಲರ ಇಷ್ಟಾರ್ಥಗಳನ್ನ ಈಡೇರಿಸಲಿ ಅನ್ನೋದೆ ನಮ್ಮೆಲ್ಲರ ಪ್ರಾರ್ಥನೆ… ಏನಂತೀರಾ???

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

 

 
Follow

Get every new post delivered to your Inbox.

Join 28 other followers